ಪ್ರಶಾಂತ್ ಎನ್ ಮಲ್ಲಿಕ್
ಮೈಸೂರು: ಬಂಡೀಪುರ ರಾತ್ರಿ ಸಂಚಾರ ತೆರವು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತೆಂಗಿನಕಾಯಿ ಹೊಡೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಮೈಸೂರಿನ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಬಂಡೀಪುರ ರಾತ್ರಿ ಸಂಚಾರ ಪ್ರಾರಂಭ ಮಾಡಲಿಕ್ಕೆ ಹಲವು ಪ್ರಯತ್ನ ಮಾಡಲಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ, ಒತ್ತಡ ಹಾಕುತ್ತಿರುವವರು ಯಾರು ಎಂದು ಪ್ರಶ್ನೆ ಮಾಡಿದರು.
ಕರ್ನಾಟಕವು ಕೇರಳ ಸರ್ಕಾರಕ್ಕೆ ಮಣಿದು ರಾತ್ರಿ ಸಂಚಾರ ನಿಷೇಧ ತೆರವು ಮಾಡಿದ್ರೆ ಅಪಾಯ. ಇದರಿಂದ ಪ್ರಾಣಿ ಸಂಕುಲಗಳಿಗೆ ತೊಂದರೆಯಾಗುತ್ತದೆ. ನಮ್ಮಲ್ಲಿ ಹುಲಿಗಳ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು. ನಿಷೇಧ ತೆರವು ಮಾಡಿದರೆ ಉಗ್ರ ಹೋರಾಟ ಮಾಡುವುದು ಗ್ಯಾರಂಟಿ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.





