ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಪ್ರಚೋದನೆ ನೀಡಿ ತಲೆ ಮರೆಸಿಕೊಂಡಿದ್ದ ಆರೋಪಿ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿ ಯನ್ನುಕಡೆಗೂ ಬಂಧಿಸಲಾಗಿದೆ.
ಘಟನೆಗೂ ಮುನ್ನಾ ಪ್ರಚೋದನಾಕಾರಿ ಭಾಷಣ ಮಾಡಿದ್ದ ರಾಜೀವ್ ನಗರ ನಿವಾಸಿ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿ ಅಂದಿನಿಂದ ತಲೆಮರೆಸಿಕೊಂಡಿದ್ದರು. ಅಂದು ಆತ ಮಾಡಿದ್ದ ಭಾಷಣ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಆತನ ಬಂಧನಕ್ಕೆ ಹೆಚ್ಚಿನ ಒತ್ತಡವಿತ್ತು.
ಆತನ ಬಂಧನಕ್ಕೆ ಸಿಸಿಬಿ ಪೊಲೀಸರು ತಂಡ ರಚನೆ ಮಾಡಿದ್ದರು. ಪೊಲೀಸರ ಸತತ ಕಾರ್ಯಾಚರಣೆ ಬೆನ್ನಲ್ಲೇ ಗುರುವಾರ ಮುಂಜಾನೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದ್ಯ ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ.
ಇನ್ನು ವಿವಾದಿತ ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್ ಎಂಬಾತನನ್ನು ಗಡಿಪಾರು ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಅರೋಪಿಗೆ ಜಾಮೀನು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಬಳಿಕ ಗಡಿಪಾರಿಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.