ಮೈಸೂರು: ಗಣೇಶ ಹಬ್ಬದ ಪ್ರಯುಕ್ತ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಅರ್ಚಕ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಕಬ್ಬು, ಬೆಲ್ಲ ಹಾಗೂ ವಿವಿಧ ಬಗೆಯ ಹಣ್ಣುಗಳು, ತಿನಿಸುಗಳನ್ನು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ದಿನನಿತ್ಯ ತಾಲೀಮಿನಲ್ಲಿ ಭಾಗಿಯಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿವೆ.
ಇದಕ್ಕಾಗಿಯೇ ದಸರಾ ಗಜಪಡೆಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದ್ದು, ಎಲ್ಲಾ ಆನೆಗಳು ಆರೋಗ್ಯದಿಂದ ಇವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಮನೆ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ದಸರೆಯಲ್ಲಿ ಭಾಗವಹಿಸಲು ಕಾಡಿನಿಂದ ಆಗಮಿಸಿರುವ ಎಲ್ಲ ಆನೆಗಳಿಗೂ ವಿಶೇಷ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಂಚಫಲ, ಕೋಡುಬಳೆ, ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ ಗಣೇಶನ ಇಷ್ಟದ ತಿನಿಸುಗಳನ್ನು ಗಜಪಡೆಗೆ ನೀಡಲಾಯಿತು.





