Mysore
21
overcast clouds
Light
Dark

ಇಂದು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ

ಮೈಸೂರು: ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವರ್ಧಂತಿ ಸಂಭ್ರಮ ಮನೆಮಾಡಿದ್ದು, ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಭೇಟಿ ನೀಡಿ, ತಾಯಿಯ ದರ್ಶನ ಪಡೆಯುತ್ತಿದ್ದಾರೆ.

ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ದೇವಿಯ ಜನ್ಮದಿನವನ್ನು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳೊಂದಿಗೆ ದೇವಿಯ ಮೆರವಣಿಗೆಯನ್ನು ಮಾಡಲಾಯಿತು.

ಇಡೀ ಮೈಸೂರು ನಗರವು ತಮ್ಮ ನೆಚ್ಚಿನ ದೇವಿಯ ಜನ್ಮದಿನವನ್ನು ಬೆಳಿಗ್ಗೆಯಿಂದಲೇ ಪ್ರಸಾದ ವಿತರಿಸುವ ಮೂಲಕ ಆಚರಿಸಲಾಗುತ್ತಿದೆ.

ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ದಿನದಂದು ತಾಯಿ ಚಾಮುಂಡಿಯನ್ನು ಅದ್ದೂರಿಯಾಗಿ ಅಲಂಕರಿಸಲಾಗಿದ್ದು, ಹೂವು, ಹಣ್ಣುಗಳಿಂದ ವಿಶೇಷವಾಗಿ ಅಲಂಕೃತಗೊಂಡ ದೇವಿಯು ಗರ್ಭಗುಡಿಯಿಂದ ಸಾರ್ವಜನಿಕರಿಗೆ ನೇರ ದರ್ಶನ ನೀಡಿದ್ದಾಳೆ.

ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ದೇವಿಗೆ ಮಾತ್ರವಲ್ಲ, ಇಡೀ ದೇವಾಲಯವನ್ನು ಹೂವು ಮತ್ತು ಹಣ್ಣುಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ.

ಇಂದು ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರಿಗೆ ವಿಶೇಷ ಬಸ್‌ ಸೌಲಭ್ಯಗಳನ್ನು ಮಾಡಲಾಗಿದೆ.

ಬೆಟ್ಟಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಸಾದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಟ್ಟದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಳ್ಳಬಹುದಾಗಿದೆ.