ಮೈಸೂರು: ಟಿಪ್ಪು ಸುಲ್ತಾನೇ ಕೆಆರ್‌ಎಸ್ ಡ್ಯಾಂಗೆ ಅಡಿಗಲ್ಲು ಹಾಕಿರೋದು. ಇದನ್ನು ನಾನು 15 ವರ್ಷಗಳ ಹಿಂದೆಯೇ ಹೇಳಿದ್ದೇ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕೆಆರ್‌ಎಸ್‌ಗೆ ಡ್ಯಾಂಗೆ ಟಿಪ್ಪು ಅಡಿಗಲ್ಲು ಹಾಕಿದ್ದು ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನೇ ಡ್ಯಾಂಗೆ ಅಡಿಗಲ್ಲಿಟ್ಟಿರೋದು. ಇದನ್ನು ನಾನು 15 ವರ್ಷಗಳ ಹಿಂದೆಯೇ ಹೇಳಿದ್ದೇ. ಇದು ಮಾಧ್ಯಮ ಪ್ರತಿನಿಧಿಗಳಾದ ನಿಮಗೆ ಗೊತ್ತಿಲ್ವಾ.? ಎಂದು ಪ್ರಶ್ನೆ ಮಾಡುವ ಮೂಲಕ ಮಹದೇವಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇನ್ನು ಕೆಆರ್‌ಎಸ್ ಅಣೆಕಟ್ಟಿನ ಬಳಿಯೇ ಶಿಲಾನ್ಯಾಸ ಇದೆ. ಕೆಆರ್‌ಎಸ್‌ಗೆ ಒಳಗೆ ಹೋಗುವಾಗ ಬಲಗಡೆ ದ್ವಾರದಲ್ಲಿ ಟಿಪ್ಪುನೇ ಅಡಿಗಲ್ಲಿಟ್ಟಿದ್ದು ಎಂದು ಬರೆದಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ವಿವಾದ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ಇನ್ನು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅಚ್ವುಕಟ್ಟಾಗಿ ಮಾಡಬೇಕು. ದಸರಾ ಅಂದ್ರೆ ಆನೆ ಕರೆಸೋದು, ಸ್ನಾನ, ವಾಕಿಂಗ್ ಮಾಡಿಸೋದು, ಮೆರವಣಿಗೆ ಮಾಡಿಸೋದಲ್ಲ. ಸಾಂಪ್ರದಾಯಿಕ ಪರಂಪರೆಯನ್ನು ಸಾರುವ ರೀತಿಯಲ್ಲಿ ದಸರಾ ಮಾಡಬೇಕು. ಆಚಾರ-ವಿಚಾರ ತಿಳಿಸುವ ಆಚರಣೆ ಮಾಡಬೇಕು. ಚಾಮರಾಜನಗರದಲ್ಲಿ ಪ್ರತಿ ಬಾರಿಯೂ ನಡೆಯುತ್ತಿದ್ದ ಗ್ರಾಮೀಣ ದಸರಾವನ್ನು ಈ ಬಾರಿಯೂ ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅದು ನಿಲ್ಲಬಾರದು. ಒಂದು ವೇಳೆ ಅಲ್ಲಿ ದಸರಾ ನಿಂತುಹೋದರೆ ಚಾಮರಾಜನಗರ ಜನತೆಗೆ ಅಪಮಾನ ಮಾಡಿದ ರೀತಿ ಆಗುತ್ತದೆ ಎಂದು ಹೇಳಿದರು.





