ಮೈಸೂರು: ಸ್ಪೀಕರ್ ಮೇಲೆ ಪೇಪರ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, 40 ವರ್ಷಗಳ ರಾಜಕೀಯ ಜೀವನದಲ್ಲಿ ಈ ದೃಶ್ಯ ನೋಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಡೆಯುವ ಚರ್ಚೆಗಳು ಗುಣಾತ್ಮಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿರಬೇಕು. ಆದರೆ ನಿನ್ನೆ ವಿಪಕ್ಷ ನಾಯಕರು ಸದನದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ವಿರೋಧ ಪಕ್ಷದ 18 ಮಂದಿ ಶಾಸಕರನ್ನು ಅಮಾನತು ಮಾಡಿರುವುದು ಸರಿಯಾಗಿದೆ. ಸ್ಪೀಕರ್ ಅವರು ವಿವೇಚನೆಯಿಂದಲೇ ಈ ಕ್ರಮ ಕೈಗೊಂಡಿದ್ದಾರೆ ಎಂದರು.
ಇನ್ನು ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿರುವ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತನಿಖೆಯ ಬಗ್ಗೆ ಈಗಾಗಲೇ ಸಿಎಂ ಹಾಗೂ ಗೃಹ ಸಚಿವರು ಹೇಳಿದ್ದಾರೆ. ತನಿಖೆ ನಡೆದ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ. ತನಿಖೆ ಬಳಿಕ ಆರೋಪಿಗಳು ಯಾರೆಂದು ಗೊತ್ತಾಗುತ್ತದೆ. ಸುಮ್ಮನೆ ಊಹಾಪೋಹ ಬೇಡ ಎಂದರು.





