ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ಧರ್ಮಸ್ಥಳ ಚಲೋ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ತನಿಖೆಯನು ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಸತ್ಯ ಹೊರಬರಬೇಕು. ಧರ್ಮಸ್ಥಳದ ಅನುಮಾನ ತೂಗುಕತ್ತಿಯಿಂದ ಹೊರ ಹೋಗಲಿ ಎಂದು ಎಸ್ಐಟಿ ಮಾಡಿದ್ದೇವೆ. ಬಿಜೆಪಿ ಕೂಡ ಸ್ವಾಗತ ಮಾಡಿದೆ. ಈಗ ರ್ಯಾಲಿ ಮಾಡುತ್ತಿದ್ದಾರೆ. ಆದರೆ ಬಿಜೆಪಿಗೆ ಧರ್ಮ ಜಾತಿ ಏನು ಗೊತ್ತಿಲ್ಲ. ಬಿಜೆಪಿಯವರು ಧರ್ಮಸ್ಥಳಕ್ಕೆ ಧರ್ಮ ಯಾತ್ರೆ ಮಾಡ್ತಾರೆ. ಅದೇ ರಾಜ್ಯಕ್ಕೆ ಅನ್ಯಾಯ ಆಗಿದೆ. ಈ ಬಗ್ಗೆ ಕೇಂದ್ರದಲ್ಲಿ ಅನುದಾನದ ಬಗ್ಗೆ ಮಾತೆ ಎತ್ತಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ಇದ್ದಾಗ ಸಿಬಿಐಗೆ ಒಂದು ಪ್ರಕರಣ ಕೂಡ ಕೊಟ್ಟಿಲ್ಲ. ಈಗ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಕೊಡಿ ಅಂತೆಲ್ಲ ಹೇಳುತ್ತಾರೆ. ಎಸ್‌ಐಟಿಗೆ ನಾನು ಸಮಯ ನಿಗದಿ ಮಾಡಿಲ್ಲ. ತನಿಖೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ. ತನಿಖೆಗೆ ಯಾವುದೇ ಹಸ್ತಕ್ಷೇಪ ಇಲ್ಲ. ಜನರಿಗೆ ಸತ್ಯ ಗೊತ್ತಾಗಬೇಕು. ಬೇರೆ ತನಿಖೆ ಸದ್ಯಕ್ಕೆ ಅವಶ್ಯಕತೆ ಇಲ್ಲ ಅನಿಸುತ್ತದೆ ಎಂದು ಹೇಳಿದರು.
ಇನ್ನು ಆಸ್ತಿ ಮುದ್ರಾಂಕ ಶುಲ್ಕ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮಲ್ಲಿ ಕಡಿಮೆಯಿದೆ ಎಂದರು.





