ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಕೆ.ಹರೀಶ್ ಗೌಡ ಅವರು, ನನ್ನ ಚಾಮರಾಜ ಕ್ಷೇತ್ರದಲ್ಲೂ ಮತಗಳ್ಳತನ ಆಗಿದೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಚಾಮರಾಜ ಕ್ಷೇತ್ರದಲ್ಲೂ ಮತಗಳ್ಳತನ ಆಗಿದೆ. ಯಾವ ಯಾವ ಬೂತ್‌ಗಳಲ್ಲಿ ಮತಗಳ್ಳತನ ಆಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಈ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷ ಹೋರಾಟ ಮಾಡ್ತಿದೆ. ನಮ್ಮ ಕ್ಷೇತ್ರದ ಮತಗಳ್ಳತನ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ದಸರಾ ಹತ್ತಿರ ಬರುತ್ತಿದೆ. ಜಂಬೂ ಸವಾರಿ ಸಾಗುವ ರಸ್ತೆ ಮಾರ್ಗ ಚೆನ್ನಾಗಿದೆ. ನಗರದ ಬೇರೆ ಬೇರೆ ಕಡೆ ಸಾಕಷ್ಟು ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚಲಾಗುತ್ತದೆ. ಈಗಾಗಲೇ ನಗರದ 120 ಕಿಲೋ ಮೀಟರ್ ರಸ್ತೆಯನ್ನು ಕಾಂಕ್ರಿಟ್ ರಸ್ತೆ ಮಾಡಲು ಸಿಎಂ ನಿರ್ಧಾರ ಮಾಡಿದ್ದಾರೆ. ಮಳೆ ಕಡಿಮೆ ಆದ ಮೇಲೆ ರಸ್ತೆ ಕೆಲಸ ಶುರು ಆಗುತ್ತದೆ ಎಂದು ಹೇಳಿದರು.





