Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಿಜೆಪಿಯಲ್ಲಿರುವುದು ಒಂದೇ ಬಣ, ಅದು ಕೇಸರಿ ಬಣ: ಕೌಟಿಲ್ಯ ರಘು

ಮೈಸೂರು: ರಾಷ್ಟ್ರದ ಹಿತಾಸಕ್ತಿಗಾಗಿ ಜನ್ಮ ತಾಳಿದ ಬಿಜೆಪಿ ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಬಣವಿಲ್ಲ. ಬಿಜೆಪಿಯಲ್ಲಿರುವುದು ಒಂದೇ ಒಂದು ಬಣ, ಅದು ಕೇಸರಿ ಬಣ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಕೌಟಿಲ್ಯ ರಘು ತಿಳಿಸಿದ್ದಾರೆ.

ನಗರದಲ್ಲಿ ಇಂದು(ನ.22) ವಕ್ಫ್ ಕಾಯ್ದೆ ವಿರುದ್ಧದ ʼನಮ್ಮ ಭೂಮಿ, ನಮ್ಮ ಹಕ್ಕುʼ ಹೆಸರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರರವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದಾತ್ತ ಉದ್ದೇಶಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬಿಜೆಪಿಯಲ್ಲಿ ಯಾವ ಬಣವೂ ಇಲ್ಲ, ಇರುವುದೊಂದೇ ಬಣ. ಅದು ಕೇಸರಿ ಬಣ ಎಂದು ತಿಳಿಸಿ ಪರೋಕ್ಷವಾಗಿ ಬಿಜೆಪಿ ಶಾಸಕ ಯತ್ನಾಳ್‌ ಹಾಗೂ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿವೆ. ಪ್ರಸ್ತುತ ಪರಿಸ್ಥಿತಿ ಇತಿಹಾಸ ಪುಟಗಳನ್ನು ನೆನಪಿಸುವಂತಿದ್ದು, ಅಂದಿನ ಖಿಲ್ಜಿ ಸಂತತಿಯ ದೊರೆ ಅಲ್ಲಾವುದ್ದೀನ್ ಖಿಲ್ಜಿ ತನ್ನ ಬಂಟ ಮಲ್ಲಿಕಾಫರ್‌ನನ್ನು ಛೂ ಬಿಟ್ಟು ಹಿಂದೂ ಸಾಮ್ರಾಜ್ಯಗಳ ಮೇಲೆ ಆಕ್ರಮಣ ನಡೆಸಿದ ರೀತಿಯಂತೆಯೇ ಇಂದು ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್‌ ಖಾನ್‌ ಮೂಲಕ ವಕ್ಫ್ ಹೆಸರಿನಲ್ಲಿ ರಾಜ್ಯದ ರೈತರ ಹಾಗೂ ಮಠ-ಮಾನ್ಯಗಳ ಭೂಮಿ ಕಸಿಯುವ ದುರಾಕ್ರಮಣ ನೀತಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿಸುವ ಮೂಲಕ ಈ ನೆಲದ ನೈಜ ಭೂಮಾಲೀಕರ ಹಕ್ಕನ್ನು ಸಂರಕ್ಷಿಸುವುದು ಬಿಜೆಪಿಯ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಪ್ರತಿಭಟನೆಯ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರುಗಳಾದ ಎಲ್‌.ನಾಗೇಂದ್ರ, ಎಲ್‌.ಆರ್‌. ಮಹದೇವಸ್ವಾಮಿ , ಶಾಸಕ ಟಿ.ಎಸ್‌.ಶ್ರೀವತ್ಸ, ಬಿಜೆಪಿ ವಕ್ತಾರ ಎಂ.ಜಿ. ಮಹೇಶ, ಮಾಜಿ ಶಾಸಕ ಬಸವರಾಜು, ಸಂದೇಶ್‌ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Tags: