ಮೈಸೂರು: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ ಎಂದು ಜಿಲ್ಲಾ ಪಶು ಸಂಗೋಪನೆ ಉಪ ನಿರ್ದೇಶಕ ಡಾ.ನಾಗರಾಜು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆ ಜಿಲ್ಲೆಯಾದ್ಯಂತ ಉತ್ತಮವಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಈಗಾಗಲೇ ನಮ್ಮಲ್ಲಿ ಇನ್ನೂ 52 ವಾರಗಳ ಕಾಲ ಜಾನುವಾರುಗಳಿಗೆ ಬೇಕಾದ ಮೇವಿನ ದಾಸ್ತಾನು ಇದೆ. ಜೊತೆಗೆ ಹಸಿರು ಮೇವು ಬೆಳೆಯಲು ಇಲ್ಲಿಯವರೆಗೆ ಸುಮಾರು 13 ಸಾವಿರ ಮೇವಿನ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ 7 ಸಾವಿರ ಕಿಟ್‌ಗಳನ್ನು ವಿತರಣೆ ಮಾಡಲು ಇಲಾಖೆ ಮುಂದಾಗಿದೆ. ಬೇಸಿಗೆ ಸಂದರ್ಭದಲ್ಲಿ ರಾಸುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ರೈತ ಬಂಧುಗಳಿಗೆ ನಮ್ಮ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಬೇಸಿಗೆ ಸಂದರ್ಭದಲ್ಲಿ ರಾಸುಗಳನ್ನು ಬಿಸಿಲಿಗೆ ಹೆಚ್ಚಾಗಿ ಬಿಡದೇ ಮುಂಜಾನೆ ಮತ್ತು ಸಂಜೆ ವೇಳೆ ಹೊರಗಡೆ ಬಿಡಬೇಕು.
ಅವುಗಳಿಗೆ ಶುದ್ಧವಾದ ತಣ್ಣನೆಯ ನೀರನ್ನೇ ಕೊಡಬೇಕು. ಹಸಿರು ಮೇವನ್ನು ಹೆಚ್ಚು ಹೆಚ್ಚು ಕೊಡಬೇಕು ಎಂದು ಸಲಹೆ ನೀಡಿದರು.
ಇನ್ನು ರಾಸುಗಳಿಗೆ ಬರುವ ಕಾಲು ಬಾಯಿ ಜ್ವರದ ನಿಯಂತ್ರಣಕ್ಕೆ ಈಗಾಗಲೇ 6 ಬಾರಿ ಲಸಿಕಾ ಅಭಿಯಾನ ಮುಗಿಸಿದ್ದೇವೆ. ಮತ್ತೆ 7ನೇ ಲಸಿಕಾ ಕಾರ್ಯಕ್ರಮವನ್ನು ಮುಂದಿನ ಏಪ್ರಿಲ್ ತಿಂಗಳಿನಿಂದ ಆರಂಭಿಸುತ್ತೇವೆ. ಈಗ ಎಲ್ಲೂ ಕೂಡ ಕಾಲು ಬಾಯಿ ಜ್ವರದಂತಹ ಪ್ರಕರಣಗಳು ಕಂಡು ಬರುತ್ತಿಲ್ಲ. ಲಸಿಕೆ ಹಾಕುವುದರಿಂದ ಸಾಕಷ್ಟು ಕಡಿಮೆ ಆಗಿದೆ. ಈಗಾಗಲೇ ಔಷಧಿ ದಾಸ್ತಾನು ಕೂಡ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.





