ಮೈಸೂರು: ಸಿಎಂ ಪತ್ನಿ ಪಡೆದಿರುವ ಸೈಟ್ ವಿಚಾರದಲ್ಲಿ ಯಾವುದೇ ರೀತಿಯ ಆಕ್ರಮ ಆಗಿಲ್ಲ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲು ಆರಂಭಿಸಿದ್ದಾರೆ. ಚಾಮುಂಡೇಶ್ವರಿ ಸಹಕಾರ ಸಂಘದ ಹೆಸರಿನಲ್ಲಿ ನಿವೇಶನ ನೀಡಲು ಬಿಜೆಪಿ ಸರ್ಕಾರದ ಅವಧಿಯಲ್ಲೇ ತೀರ್ಮಾನ ಆಗಿತ್ತು. ಈ ಹಗರಣವನ್ನೆಲ್ಲಾ ನಮ್ಮ ಸರ್ಕಾರ ಬಯಲು ಮಾಡುತ್ತದೆ ಎಂಬ ಭಯದಿಂದ ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಅವ್ಯವಹಾರದ ಬಗ್ಗೆ ನಾನು ಸಿಎಂ ಗಮನಕ್ಕೂ ತಂದಿದ್ದೇನೆ. ಈಗ ಸಿಎಂ ನಿರ್ದೇಶನದಂತೆ 48 ನಿವೇಶನಗಳ ಮಂಜೂರಾತಿ ರದ್ದಾಗಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಚಾಮುಂಡೇಶ್ವರಿ ಸಹಕಾರ ಸಂಘದ ಹೆಸರಿನಲ್ಲಿ ಬೇನಾಮಿ ಆಸ್ತಿಯನ್ನು ಜನರಿಗೆ ಕೊಡಲಾಗಿದೆ. ಹಗರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. 50:50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ಬಹಳಷ್ಟು ಅಕ್ರಮ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.





