ಮೈಸೂರು: ನಗರದ ಪಿಕೆಟಿಬಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು, ಇದೀಗ ಸಿಎಂ ಪರ ಶಾಸಕ ಜಿ.ಟಿ.ದೇವೇಗೌಡ ಬ್ಯಾಟ್ ಬೀಸಿದ್ದಾರೆ.
ಅರಮನೆ ಆವರಣದಲ್ಲಿ ಇಂದು(ಡಿಸೆಂಬರ್.28) ಆಯೋಜಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಿನ್ಸೆಸ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಿಕೆಟಿಬಿ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿಲ್ಲ ಎನ್ನುವುದಾದರೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರು ನಾಮಕರಣ ಮಾಡಿರುವುದರೇ ತಪ್ಪೇನಿಲ್ಲ ಎಂದಿದ್ದಾರೆ.
ಈ ರಸ್ತೆಯ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಸಂಸದ ಯದುವೀರ್ ಹೇಳುವಂತೆ ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳುತ್ತಾರೆ. ಅಲ್ಲದೇ ಇನ್ನೂ ಕೆಲವರು ಆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡಿದರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ.





