ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿನ್ಸೆಸ್ ರಸ್ತೆ ಅರಮನೆಗೆ ಸಂಬಂಧಪಟ್ಟಿಲ್ಲ. ಸಮಾಜದ ಹಿತಕ್ಕಾಗಿ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದೆ. ಈ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದು ಸೂಕ್ತವಲ್ಲ. ಹೀಗಾಗಿ ಸಿದ್ದರಾಮಯ್ಯ ಹೆಸರಿಡುವುದು ಬೇಡ ಎಂದರು.
ಇನ್ನು ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನೀತಿ ನಿಯಮಗಳಿಗೆ ಅನುಸಾರ ಕೆಲಸ ಮಾಡಲಿ. ಅವರದ್ದೇ ಆದ ಇತಿಹಾಸ ಸೃಷ್ಟಿಸಿದರೆ ಅದು ತಪ್ಪು ಎಂದು ವಾಗ್ದಾಳಿ ನಡೆಸಿದರು.
ಇನ್ನು ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಹಾಲು, ಪೆಟ್ರೋಲ್, ಬಸ್ ದರ ಏರಿಕೆ ಆಗಿದೆ. ಪಂಚ ಗ್ಯಾರಂಟಿಗಳಿಂದಲೇ ವಿಧಾನಸಭೆ ಚುನಾವಣೆ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೇರೆ ಬೇರೆ ಕಡೆಯಿಂದ ಹಣ ಉತ್ಪಾದನೆ ಮಾಡುತ್ತಿದ್ದು, ಕಾರಣಾಂತರಗಳಿಂದ ಈ ರೀತಿ ಮಾಡಲಾಗುತ್ತಿದೆ. ಆರ್ಥಿಕ ದೃಷ್ಟಿಯಿಂದ ಎಲ್ಲವನ್ನೂ ಪರಿಶೀಲನೆ ಮಾಡಿ, ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.





