ಮೈಸೂರು: ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಮಾಡಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಮೇಯರ್ ಶಿವಕುಮಾರ್ ಕಿಡಿಕಾರಿದರು.
ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಇ-ಖಾತಾ ಮಾಡಿಸಿಕೊಳ್ಳಲು ಸಾಧ್ಯವಾಗದೇ ಜನರು ಪರದಾಡುವಂತಾಗಿದೆ. ಸ್ವತಃ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇ-ಖಾತಾ ವ್ಯವಸ್ಥೆ ಸಂಪೂರ್ಣ ಗೊಂದಲವಾಗಿದ್ದು, ಇದನ್ನು ಜಾರಿಗೆ ತರುವ ಮೊದಲು ಮನೆ ಮನೆಗೆ ತೆರಳಿ ಸರ್ವೇ ನಡೆಸಬೇಕಿತ್ತು. ಎಲ್ಲಾ ಆಸ್ತಿಗಳ ಡೇಟಾ ಸಂಗ್ರಹಣೆ ಬಳಿಕವೇ ಇ-ಖಾತಾ ಕಡ್ಡಾಯಗೊಳಿಸಬೇಕಾಗಿತ್ತು. ಆದರೆ ಯಾವುದೇ ಪೂರ್ವಸಿದ್ಧತೆ ಇಲ್ಲದೇ ತರಾತುರಿಯಲ್ಲಿ ಇ-ಖಾತಾ ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.





