ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶೆಡ್‌ವೊಂದರಲ್ಲಿ ತಪಾಸಣೆ ನಡೆಸಿದ್ದಾರೆ.
ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಕೆಲ ಆರೋಪಿಗಳನ್ನು ಮಾದಕ ದ್ರವ್ಯ ನಿಯಂತ್ರಣ ಘಟಕದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ ಅವರುಗಳು ಮೈಸೂರಿನಲ್ಲಿ ಕೂಡ ಘಟಕವಿದೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳ ತಂಡ ಮೈಸೂರಿಗೆ ಆಗಮಿಸಿದೆ. ಇದೇ ವೇಳೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಇರುವ ಟುಕ್ಕು ಕೆಮಿಕಲ್ ಪ್ರೊಡಕ್ಷನ್ ಸಲ್ಯೂಷನ್ ಎಂಬ ಫಲಕವಿದ್ದ ಶೆಡ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಕೆಲ ವಸ್ತುಗಳನ್ನು ವಶಕ್ಕೆ ಪಡೆದು ತೆರಳಿದ್ದಾರೆ. ಡಿಟರ್ಜೆಂಟ್, ಸೋಡಾ, ಉಪ್ಪು ಸೇರಿದಂತೆ ಕಚ್ಚಾವಸ್ತುಗಳು ಪತ್ತೆ ಆಗಿವೆ. ಆದರೆ, ಯಾವುದೇ ಮಾದಕ ದ್ರವ್ಯ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.





