ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಆಪರೇಷನ್ ಮಾಡಿಸಿಕೊಳ್ಳಲು ದರ್ಶನ್ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದರ್ಶನ್‌ಗೆ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಈ ಬಗ್ಗೆ ವೈದ್ಯರಾದ ಡಾ.ಅಜಯ್ ಹೆಗ್ಡೆ ಎಂಬುವವರು ಮಾಹಿತಿ ನೀಡಿದ್ದಾರೆ.
ದರ್ಶನ್ ಆಪರೇಷನ್ ಮಾಡಿದ ಒಂದೂವರೆ ತಿಂಗಳುಗಳ ಕಾಲ ಸಿನಿಮಾದ ಶೂಟಿಂಗ್‌ನಲ್ಲಿ ಫೈಟ್ ದೃಶ್ಯದಲ್ಲಿ ಭಾಗಿಯಾಗುವಂತಿಲ್ಲ. ಕೇವಲ ಚಿತ್ರೀಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ದರ್ಶನ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ಗೂ ಮುನ್ನವೇ ಆಪರೇಷನ್ ಮಾಡಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಇನ್ನು ಆಪರೇಷನ್ ಬಳಿಕ ಮೂರು ದಿನ ಸಂಪೂರ್ಣ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಐದು ತಿಂಗಳಿಗೂ ಹೆಚ್ಚು ಕಾಲಿ ಜೈಲು ವಾಸ ಅನುಭವಿಸಿದ್ದ ನಟ ದರ್ಶನ್ ತೀವ್ರ ಬೆನ್ನನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಒಂದೂವರೆ ತಿಂಗಳ ಕಾಲ ಆಸ್ಪತ್ರೆ ಹಾಗೂ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ದರ್ಶನ್, ರೆಗ್ಯುಲರ್ ಜಾಮೀನು ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಹೈಕೋರ್ಟ್ ನಟ ದರ್ಶನ್‌ಗೆ ರೆಗ್ಯುಲರ್ ಜಾಮೀನು ನೀಡಿತ್ತು. ಈಗ ದರ್ಶನ್ ಶೂಟಿಂಗ್‌ನಲ್ಲಿ ಭಾಗಿಯಾಗಬೇಕಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




