ಮೈಸೂರು : ನಗರದ ಮೂರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಕೆಲ ತಿಂಗಳ ಹಿಂದೆ ಮಂಗಳೂರಿನ ರೆಸಾರ್ಟ್ ಒಂದರ ಈಜು ಕೊಳದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಲಾ 2 ಲಕ್ಷ ರೂ.ನಂತೆ 6 ಲಕ್ಷ ರೂ. ಪರಿಹಾರದ ಮಂಜೂರಾತಿ ಪತ್ರ ವಿತರಿಸಿದ್ದಾರೆ.
ನಗರದ ವಿಜಯನಗರದ ಎಸ್.ನವೀನ್ ಕುಮಾರ್ ಪುತ್ರಿ ಎನ್.ಕೀರ್ತನಾ(21),ಮಲ್ಲೇಶ್ ಪುತ್ರಿ ಕುರುಬಾರಳ್ಳಿಯ ನಿಶಿತಾ(21), ರಾಮಾನುಜ ರಸ್ತೆಯ ಎಸ್.ಎಂ.ಎನ್ ಶ್ರೀನಿವಾಸ್ ಪುತ್ರಿ ಪಾರ್ವತಿ(20) ನೀರಿನಲ್ಲಿ ಮುಳುಗಿ ಮೃತರಾಗಿದ್ದರು. ಈ ಸಂಬಂಧ ಮಂಗಳೂರಿನ ಉಲ್ಲಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮೂರು ವಿದ್ಯಾರ್ಥಿಗಳು ಅತ್ಯಂತ ಕಡುಬಡತನದ ಕುಟುಂಬದವರಾಗಿದ್ದರು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಲಿ ಮಾಡಿ ಪೋಷಕರು ಇಂಜಿನಿಯರಿಂಗ್ ಶಿಕ್ಷಣ ಕೊಡಿಸಿದ್ದರು. ಪರೀಕ್ಷೆ ಮುಗಿಸಿ ಮಂಗಳೂರಿಗೆ ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ರೆಸಾರ್ಟ್ ಒಂದರ ಈಜು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸರ್ಕಾರದ ವತಿಯಿಂದ ಮೂರು ಹೆಣ್ಣು ಮಕ್ಕಳ ಕುಟುಂಬಗಳಿಗೆ ತಲಾ 2 ಲಕ್ಷದಂತೆ ಒಟ್ಟು 6ಲಕ್ಷ ಹಣ ಪರಿಹಾರ ಘೋಷಿಸಲಾಗಿತ್ತು. ಅದರ ಮಂಜೂರು ಹಣದ ಪತ್ರವನ್ನು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಅವರು ಗೃಹ ಕಚೇರಿ ಜನನಿಯಲ್ಲಿ ವಿತರಣೆ ಮಾಡಿದ್ದಾರೆ. ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು ರೆಸಾರ್ಟ್ ವಿರುದ್ಧ ಪೋಷಕರು ಮೊಕದ್ದಮೆ ಹೂಡಿದ್ದು, ನಾನು ಸಹ ವಕೀಲರ ಜೊತೆ ಮಾತನಾಡಿದ್ದೇನೆ. ಘಟನೆ ರೆಸಾರ್ಟ್ ಅವರ ಅಜಾಗೂರಕತೆಯಿಂದಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹೊಂಡದಲ್ಲಿ ಈಜು ಹೊಡೆಯಲು ಹೋಗಿ ಬಿದ್ದು ಮಕ್ಕಳು ಸಾವನ್ನಪ್ಪುತಿದ್ದಾರೆ. ಕಾಲುವೆಗಳಲ್ಲಿ, ಕೆರೆಗಳು, ಕಾಮಗಾರಿ ನೆಡೆಯುವ ಕಟ್ಟಡಗಳ ಸಂಪ್‌ಗಳಲ್ಲಿ ಬಿದ್ದು ಸಾವನ್ನಪ್ಪುವಂತಹ ದುರ್ಘಟನೆಗಳು ನಡೆಯುತ್ತಿವೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಬೇಕು ಇಂತಹ ಘಟನೆಗಳು ಆಗದಂತೆ ಜಾಗೃತವಹಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಸೋಮು ಕುರುಬಾರಳ್ಳಿ, ಹರೀಶ್ ಗಂಧನಹಳ್ಳಿ, ನಾಗಮಹದೇವ, ಅವಿನಾಶ್‌ಉಪಸ್ಥಿತರಿದ್ದರು.





