ಮೈಸೂರು: ಈಗಾಗಲೇ ಪಕ್ಷದಲ್ಲಿ ತಾಲ್ಲೂಕು, ಜಿಲ್ಲಾ ಹಾಗೂ ಬೂತ್ ಅಧ್ಯಕ್ಷರ ಆಯ್ಕೆಯಾಗಿದೆ. ವಾರದೊಳಗೆ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿದೆ. ತದನಂತರ ಪಕ್ಷದೊಳಗಿನ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2025-26ನೇ ಸಾಲಿನ ಕೇಂದ್ರ ಬಜೆಟನ್ನು ಸ್ವಾಗತಿಸಿದರು. 15ನೇ ಹಣಕಾಸು ಆಯೋಗ ನೀಡಿರುವ ಅನುದಾನದಲ್ಲಿ ಮಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲವಿದೆ. ಬಜೆಟ್ ಟೀಕಿಸುವ ಭರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ಸಂಸದರಿಗೆ ಅನುದಾನ ಕೇಳುವ ಧೈರ್ಯ ಇಲ್ಲ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಕರ್ನಾಟಕ ಸಂಸದರು ತಂದು ಯಾವ ಅಭಿವೃದ್ಧಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರಾಜ್ಯಕ್ಕೂ ಮಲತಾಯಿ ಧೋರಣೆ ಮಾಡಿಲ್ಲ ಎಂದರು.
ಮೈಸೂರಿನ ರೈಲ್ವೆ ಉನ್ನತೀಕರಣ, ವಿಮಾನ ನಿಲ್ದಾಣ, ಮೈಸೂರು ಬೆಂಗಳೂರು ಹೆದ್ದಾರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬರಬೇಕಾಯಿತು ಎಂದು ಹೇಳಿದರು.





