ಮೈಸೂರು: ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ನೀಡಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಸರ್ಕಾರ ತಡೆ ನೀಡಿದ್ದಕ್ಕೆ ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ಹಾಗೂ ಕೋಮುವಾದಿ ನಿರ್ಧಾರ ತೆಗೆದುಕೊಂಡಿದೆ. ಸಂಜೆಯ ಒಳಗೆ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು. ಇಲ್ಲದಿದ್ದರೆ ಇದನ್ನು ವಿರೋಧಿಸುವಂತೆ ಶಿಕ್ಷಕರಿಗೆ ಕರೆ ನೀಡುತ್ತೇವೆ. ಇದನ್ನು ಖಂಡಿಸಿ ಪ್ರತಿಭಟನೆ ಕೂಡ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಏನು ಮಾಡುತ್ತಿದೆ ಎಂಬುದೇ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಗೊತ್ತಾಗುತ್ತಿಲ್ಲ. ಸರ್ಕಾರದ ನಿರ್ಧಾರಗಳು ಸಿಎಂ ಗಮನಕ್ಕೆ ಬರುತ್ತಿಲ್ಲ. ಪ್ರಶಸ್ತಿ ಘೋಷಣೆ ಮಾಡುವ ಮುನ್ನವೇ ಏಕೆ ಈ ಬಗ್ಗೆ ಯೋಚಿಸಿಲ್ಲ. ಘೋಷಣೆ ಮಾಡಿದ ನಂತರ ತಡೆ ಹಿಡಿಯುವುದು ಏಕೆ ಎಂದು ಕಿಡಿಕಾರಿದರು.