Mysore
19
clear sky

Social Media

ಶನಿವಾರ, 07 ಮಾರ್ಚ್ 2026
Light
Dark

ರಾಜ್ಯ ಬಜೆಟ್‌ ರೈತರ ಪಾಲಿಗೆ ತೀವ್ರ ನಿರಾಸೆ ತಂದಿದೆ: ಕುರುಬೂರು ಶಾಂತಕುಮಾರ್‌ ಅಸಮಾಧಾನ

ಮೈಸೂರು: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ರೈತರ ಪಾಲಿಗೆ ತೀವ್ರ ನಿರಾಸೆ ತಂದಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ದೇಶದಲ್ಲಿಯೇ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ಇದನ್ನು ತಡೆಗಟ್ಟಲು ಬಜೆಟ್‌ನಲ್ಲಿ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ಘೋಷಿಸಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕೃಷಿ ಕ್ಷೇತ್ರದ ಬಗ್ಗೆ ಬೇಸರಗೊಂಡು ರೈತರ ಮಕ್ಕಳು ನಗರಗಳತ್ತ ವಲಸೆ ಹೋಗುತ್ತಿರುವುದು ಮತ್ತು ಮದುವೆಯಾಗಲು ಹೆಣ್ಣು ಸಿಗದಿರುವುದು ಗ್ರಾಮೀಣ ಭಾಗದ ಭೀಕರ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸದಿದ್ದರೆ ಕೃಷಿ ಕ್ಷೇತ್ರ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

​ಬಜೆಟ್‌ನಲ್ಲಿ ಘೋಷಿಸಲಾಗಿರುವ ಶೂನ್ಯ ಬಡ್ಡಿ ದರದ ಸಾಲದ ಯೋಜನೆಯು ಹಳೆಯದಾಗಿದ್ದು, ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ತೋಟಗಾರಿಕೆ ಉತ್ಪನ್ನಗಳ ದಾಸ್ತಾನಿಗಾಗಿ ದಾವಣಗೆರೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಶೀತಲೀಕರಣ ಘಟಕಗಳ ಸ್ಥಾಪನೆ, ಹಸು ಮತ್ತು ಎಮ್ಮೆಗಳ ಖರೀದಿಗೆ ಶೇಕಡಾ 25 ರಷ್ಟು ಪ್ರೋತ್ಸಾಹಧನ ನೀಡಿರುವುದು ಹಾಗೂ ರೇಷ್ಮೆ ಗೂಡು ಸಾಗಾಣಿಕೆ ವೆಚ್ಚವನ್ನು 20 ರೂಪಾಯಿಗಳಿಗೆ ಏರಿಸಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.

​ಕೃಷಿ ಕ್ಷೇತ್ರದಲ್ಲಿ ಎಐ (AI) ತಂತ್ರಜ್ಞಾನದ ಬಳಕೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿರುವುದು ಉತ್ತಮ ಚಿಂತನೆಯಾಗಿದೆ. ಅದೇ ರೀತಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವ ಸರ್ಕಾರದ ನಿರ್ಧಾರ ಮತ್ತು ಮೈಸೂರಿನ ಜಯದೇವ ಆಸ್ಪತ್ರೆಯ ಉನ್ನತೀಕರಣಕ್ಕಾಗಿ 180 ಕೋಟಿ ರೂಪಾಯಿ ಮೀಸಲಿಟ್ಟಿರುವುದು ಜನಪರವಾದ ನಿರ್ಧಾರಗಳಾಗಿವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

Tags:
error: Content is protected !!