ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಮಂಡಿಸಿದ ಬಜೆಟ್ ಕಟ್ ಅಂಡ್ ಪೇಸ್ಟ್ ಬಜೆಟ್ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.
ರಾಜ್ಯ ಬಜೆಟ್ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಿದ್ದಾರೆ. ರಾಹುಕಾಲ ಅಂತ ಮೂರು ನಿಮಿಷ ಮುಂಚಿತವಾಗಿ ಆರಂಭಿಸಿದ್ದರು. ವರ್ಷದಿಂದ ವರ್ಷಕ್ಕೆ ಪುಸ್ತಕದ ಬಜೆಟ್ ಪ್ರತಿ ದಪ್ಪವಾಗುತ್ತಿದೆ. ಆದರೆ ಬಜೆಟ್‌ನಲ್ಲಿ ಹೇಳುವುದು ಒಂದು, ಮಾಡೋದು ಇನ್ನೊಂದು. ೩.೭೦ ಲಕ್ಷ ಕೋಟಿಯಲ್ಲಿ ಇದುವರೆಗೂ ಯಾವ ಅಭಿವೃದ್ಧಿ ಆಯಿತು ಎಂದು ಪ್ರಶ್ನೆ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯ ಖಜಾನೆಯಲ್ಲಿ ಸ್ವಲ್ಪವೂ ದುಡ್ಡಿಲ್ಲ. ಈ ಹಿನ್ನೆಲೆಯಲ್ಲಿ ನೀವು ಯಾರನ್ನೂ ಮೂರ್ಖರನ್ನಾಗಿ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಹದಿನಾರು ಬಜೆಟ್ ಮಂಡಿಸಿದ್ದಾರೆಯೇ ಹೊರತು ಯಾವ ಬದಲಾವಣೆ ಹಾಗೂ ಸುಧಾರಣೆ ತಂದಿಲ್ಲ. ಇದೊಂದು ಕಟ್ ಅಂಡ್ ಪೇಸ್ಟ್ ಆಗಿದೆ ಎಂದು ಬಜೆಟ್ ವಿರುದ್ಧ ಕಿಡಿಕಾರಿದರು.
ಇನ್ನು ಬಜೆಟ್‌ನಲ್ಲಿ ನೀವು ಮೈಸೂರಿಗೆ ಏನು ಕೊಟ್ಟಿದ್ದೀರಿ. ಹಳೆಯದನ್ನೇ ಹೇಳ್ತಾ ಇದ್ದೀರಿ. ಈಗಾಗಲೇ ನಿಮ್ಹಾನ್ಸ್ ಕೆಲಸ ಶುರುವಾಗಿದೆ. ಚಿತ್ರನಗರಿ ಎಂದು ಎಷ್ಟು ವರ್ಷದಿಂದ ಹೇಳ್ತಾ ಇದ್ದೀರಿ. ಜನತೆ ರೇಷ್ಮೆ ಬೆಳೆಯನ್ನೇ ಮರೆತುಬಿಟ್ಟಿದ್ದಾರೆ. ರೇಷ್ಮೆ ಬೆಳೆಯನ್ನೇ ಬೆಳೆಯದಿರುವಾಗ ಮಾರುಕಟ್ಟೆ ಇಟ್ಟುಕೊಂಡು ಏನು ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು.





