ಮೈಸೂರು: ಮೈಸೂರಿನ ಕಲ್ಯಾಣಗಿರಿ ನಾಲ್ಕನೇ ಹಂತದಲ್ಲಿರುವ ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ 24ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವದ ಪ್ರಯುಕ್ತ ದೇವಿಯ ಪ್ರತಿಷ್ಠಾಪನಾ ಕಾರ್ಯ ಅದ್ಧೂರಿಯಾಗಿ ಜರುಗಿತು.
ತುಂತುರು ಮಳೆಯ ನಡುವೆ ಸಮುದಾಯದ ಮುಖಂಡರು, ಯುವಕರು ಹಾಗೂ ಮಹಿಳೆಯರು ರಾಘವೇಂದ್ರ ನಗರದಲ್ಲಿರುವ ಮಾರಮ್ಮನ ದೇವಾಲಯಕ್ಕೆ ತೆರಳಿ ವಾದ್ಯಗೋಷ್ಠಿ ಸಮೇತ ಮೆರವಣಿಗೆ ಮೂಲಕ ದೇವಿಯ ಮೂರ್ತಿಗಳನ್ನು ಹೊತ್ತು ತಂದರು.
ಮೆರವಣಿಗೆ ಉದ್ದಕ್ಕೂ ಸಮುದಾಯದ ಯುವಕರು, ಮಹಿಳೆಯರು ಮತ್ತು ಮಕ್ಕಳು ವಾದ್ಯಗೋಷ್ಠಿಗೆ ತಕ್ಕಂತೆ ನರ್ತಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಮಂಜುನಾಥ್ ಲಾಲೆ ಮಾತನಾಡಿ, ಕಳೆದ 24 ವರ್ಷದಿಂದ ನಾವು ಚಾಮುಂಡೇಶ್ವರಿ ಉತ್ಸವ ನಡೆಸುತ್ತಿದ್ದೇವೆ. ಮೈಸೂರಿನಲ್ಲಿರುವ ಭಾವಸಾರ ಕ್ಷತ್ರಿಯ ಸಮುದಾಯದ ಎಲ್ಲಾ ಮುಖಂಡರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಮೊದಲ ದಿನ ದೇವಿಯ ಪ್ರತಿಷ್ಠಾಪನೆ, ಎರಡನೇ ದಿನ ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್ ಶೋ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನ ನೀಡಲಾಗುವುದು.
ಮೂರನೇ ದಿನ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಸಲಾಗುವುದು. ಬಳಿಕ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ತ್ರಿವೇಣಿ ವೃತ್ತದ ಮೂಲಕ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.