ಮೈಸೂರು: ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಮತ್ತು ಆರೋಗ್ಯ, ಶಿಕ್ಷಣಕ್ಕೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಪ್ರಸ್ತಾಪಿಸಿದ್ದರೂ ಅದರಲ್ಲಿ ಕೆಲವನ್ನು ಕೊಟ್ಟಿದ್ದಾರೆ, ಕೆಲವನ್ನು ಕೊಟ್ಟಿಲ್ಲ ಎಂದು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಟೀಕಿಸಿದ್ದಾರೆ.
ಇಂದು ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಬೇಡಿಕೆ ಇಟ್ಟಿದ್ದರೂ ನೀಡಿಲ್ಲ. ಕಳೆದ ಬಾರಿ ಪ್ರಸ್ತಾಪಿಸಿದ್ದ ಕಿದ್ವಾಯಿ, ಫಿಲ್ಮ್‌ಸಿಟಿಯನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹವಾದರೂ ನಗರಕ್ಕೆ ಪೂರಕವಾಗುವ ಪ್ರವಾಸೋದ್ಯಮಕ್ಕೆ ಆದ್ಯತೆನೀಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಾರ್ವಜನಿಕರ ವಿರೋಧ ಇದ್ದರೂ ಕೇಂದ್ರೀಯ ಬಸ್ ನಿಲ್ದಾಣವನ್ನು ಬನ್ನಿಮಂಟಪದಲ್ಲಿ ನಿರ್ಮಿಸಲು ಘೋಷಣೆ ಮಾಡಲಾಗಿದ್ದು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮನವೊಲಿಸಿ ಘೋಷಣೆ ಮಾಡಿದ್ದರೆ ಸರಿಯಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಸಲ್ಮಾನರ ಪರವಾಗಿರುವ ಬಜೆಟ್ ಮಂಡಿಸಿ ಅಲ್ಪಸಂಖ್ಯಾತರನ್ನು ಒಲೈಸಿದ್ದಾರೆ. ದಲಿತರು, ಹಿಂದುಳಿದ ವರ್ಗಗಳ ಅನುದಾನ ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.





