ಮೈಸೂರು : ಜಾತಿಗಣತಿ ವರದಿ (Caste Census) ಅವೈಜ್ಞಾನಿಕವಾಗಿದ್ದು, ಅದನ್ನು ಸ್ವೀಕರಿಸಲು ಮುಂದಾದರೆ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಹೇಳಿದ್ದಾರೆ.
ಗುರುವಾರ (ಏ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿಯೇ ಅನಧಿಕೃತವಾಗಿದೆ. ಆಯೋಗದ ಅಧ್ಯಕ್ಷ ಕಾಂತರಾಜು ವರದಿಗೆ ಸಹಿಯನ್ನೇ ಮಾಡಿಲ್ಲ. ಹೀಗಾಗಿ ಸಹಿ ಇಲ್ಲದ ವರದಿ ಹೇಗೆ ಅಧಿಕೃತವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕೆಲವು ದಾಖಲೆಗಳನ್ನು ಅವರೇ ಸಲ್ಲಿಸಿಕೊಂಡು ಅವರಿಗೆ ಬೇಕಾದ ಹಾಗೆ ವರದಿ ಮಾಡಿಕೊಂಡಿದ್ದಾರೆ. ಮನೆ ಮನೆಗೆ ತೆರಳಿ ದತ್ತಾಂಶ ಸಂಗ್ರಹ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಒಂದು ಈ ವೇಳೆ ಜಾತಿ ಗಣತಿ ವರದಿ ಜಾರಿಯಾದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಇದರ ಬಗ್ಗೆ ಒಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಇದೀಗ ಈ ಬಗ್ಗೆ ಪತ್ರದ ಮೂಲಕ ಜಯ ಪ್ರಕಾಶ್ ಹೆಗ್ಡೆ ಅವರು ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದ್ದೇನೆ. 15 ದಿನಗಳ ಕಾಲಾವಕಾಶದಲ್ಲಿ ಸ್ಪಷ್ಟನೆ ನೀಡಿದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಹೇಳಿದರು.
ಸ್ಪಷ್ಟನೆ ಸಿಗದಿದ್ದರೆ ಮೊದಲಿಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ. ದೂರು ದಾಖಲಿಸಿಕೊಳ್ಳದಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದರು.





