ಮೈಸೂರು: ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸಿ, ಜನರ ಮುಂದೆ ಸತ್ಯ ಬಯಲು ಮಾಡುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಶಪಥ ಮಾಡಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ತನಿಖಾ ವರದಿಯಲ್ಲಿ ಕ್ಲೀನ್‌ಚಿಟ್ ನೀಡಿದ್ದು, ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ನೇಹಮಯಿ ಕೃಷ್ಣ ಅವರು, ಲೋಕಾಯುಕ್ತ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೆಂದು ಹೇಳಿದ್ದಾರೆ. ತನಿಖೆ ಇನ್ನೂ ಬಾಕಿಯಿರುವಾಗಲೇ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ತನಿಖೆ ಮುಕ್ತಾಯಗೊಳಿಸದೇ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಇನ್ನು ಲೋಕಾಯುಕ್ತ ಪೊಲೀಸರು ಆತ್ಮಸಾಕ್ಷಿ ಮಾರಿಕೊಂಡಿದ್ದಾರೆ. ನಾನು ಸಾಕಷ್ಟು ಸಾಕ್ಷಿಗಳನ್ನು ಕೊಟ್ಟಿದ್ದೇನೆ. ಕೋರ್ಟ್‌ನಲ್ಲಿ ಪ್ರಶ್ನಿಸಿ ಎಂದು ಹೇಳಿದ್ದಾರೆ. ರಾಜ್ಯದ ಜನರಿಗೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ರಾಜ್ಯದ ಜನತೆ ಮುಂದೆ ಸತ್ಯ ಸಾಬೀತು ಮಾಡುವೆ. ಸಿಎಂಗೆ ಶಿಕ್ಷೆ ಕೊಡಿಸುವೆ ಎಂದು ಶಪಥ ಮಾಡಿದರು.





