ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಈ ಕುರಿತು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಡಾ ಕೆ ಶಿವಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಬಾರಿ ಸಿದ್ದರಾಮಯ್ಯ ತಮ್ಮ ಅವಧಿ ಪೊರೈಸಬೇಕು. ಮುಂದಿನ ಅವಧಿಗೂ ಸಿದ್ದರಾಮಯ್ಯ ಇರಬೇಕು ಎಂಬುದಕ್ಕೆ ನಮ್ಮ ತಕರಾರು ಇಲ್ಲ. ‘ಮತ್ತೆ ಮುಖ್ಯಮಂತ್ರಿ’ ಎಂಬ ನಾಟಕವನ್ನು ಸಿಎಂ ಸಿದ್ದರಾಮಯ್ಯ ನೋಡಬೇಕು. ಮತ್ತೆ ಮುಖ್ಯಮಂತ್ರಿ ನಾಟಕದಲ್ಲಿ ಇಡೀ ರಾಜಕೀಯದ ಚಿತ್ರಣವೇ ಇದೆ. ಸಿದ್ದರಾಮಯ್ಯ ಯಾವತ್ತೂ ಹೊಗಳಿಕೆಗೆ ಬೆಲೆ ಕೊಟ್ಟವರಲ್ಲ. ಇದ್ದರೆ ಇರುತ್ತೆ, ಹೋದ್ರೆ ಹೋಗುತ್ತೆ ಬಿಡಿ ಎನ್ನುವ ಮನಸ್ಥಿತಿ ಸಿದ್ದರಾಮಯ್ಯರದು. ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗುತ್ತದೆ. ಸಿದ್ದರಾಮಯ್ಯ ಮುಳುಗಿದರೆ ಅಹಿಂದ ವರ್ಗ ಮುಳುಗುತ್ತದೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಇಲ್ಲದೆ ಇರೋ ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಜನನಾ ಸಿಎಂ ಸಿಎಂ ಎಂದು ಸುಮ್ಮನೆ ಘೋಷಣೆ ಕೂಗ್ತಿರಾ? ನನ್ನನ್ನು ಸೇರಿದಂತೆ ಎಲ್ಲರನ್ನೂ ಸುಮ್ಮನೆ ಮುಂದಿನ ಸಿಎಂ ಸಿಎಂ ಘೋಷಣೆ ಕೂಗುತ್ತಾರೆ. ದಲಿತ ಸಂಘಟನೆಯ ಮುಖಂಡರು ಬುದ್ದಿವಂತರು. ಸಿದ್ದರಾಮಯ್ಯರೆ ಸಿಎಂ ಆಗಿರಲಿ. ಅವರ ಬದಲಾಗುವುದಾದರೆ ದಲಿತರಿಗೆ ಅವಕಾಶ ಕೊಡಿ ಅಂತಾರೆ ಎಂದರು.





