ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ಹೆಸರಿಗಾಗಿ ರಾಜಕೀಯ ಮುಖಂಡರ ನಡುವೆ ತೀವ್ರ ಜಟಾಪಟಿ ಜೋರಾಗಿದ್ದು, ಈ ಬಗ್ಗೆ ಶಾಸಕ ಹರೀಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಸ್ತೆ ಹೆಸರಿನ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡಲು ಪ್ರಸ್ತಾಪ ಮಾಡಿದ್ದೇ ನಾನು. ಮಹಾರಾಜರ ನಂತರ ಮೈಸೂರಿಗೆ ಸಿದ್ದರಾಮಯ್ಯ ಅತೀ ಹೆಚ್ಚು ಕೊಡುಗೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಹೆಸರಿಡಲು ನಾನೇ ಪ್ರಸ್ತಾಪ ಮಾಡಿದ್ದೇ. ಇದಕ್ಕೆ ವಿರೋಧ ಮಾಡುತ್ತಿರುವವರು ಸಿಎಂ ಸಿದ್ದರಾಮಯ್ಯ ಅವರ ವಿರೋಧಿಗಳು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಶಾಲಾ-ಕಾಲೇಜುಗಳ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ ವಿಚಾರದಲ್ಲಿ ಸಿದ್ದರಾಮಯ್ಯನವರ ಕೊಡುಗೆ ಬಹಳ ದೊಡ್ಡದು. ಪ್ರತಾಪ್ ಸಿಂಹ ಹೇಳಿದ್ದನ್ನು ಕೇಳಿ ಖುಷಿಯಾಯ್ತು. ಅವರು ಚೆನ್ನಾಗಿ ಸಿಎಂ ಸಿದ್ದರಾಮಯ್ಯ ಅವರ ಸಾಧನೆಯನ್ನು ವಿವರಿಸಿದ್ದಾರೆ. ಯಾರಿಗೆ ಮನಸ್ಸು ಶುದ್ಧಿ ಇಲ್ಲವೋ ಅವರುಗಳು ಮಾತ್ರ ಸಿದ್ದರಾಮಯ್ಯನವರ ಹೆಸರನ್ನು ವಿರೋಧ ಮಾಡುತ್ತಾರೆ. ಮಹಾತ್ಮ ಗಾಂಧಿ ಮೇಲೂ ಆರೋಪ ಮಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಬಿಜೆಪಿಯವರು ಸಿದ್ದರಾಮಯ್ಯರ ಮೇಲೆ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ. ನೂರಕ್ಕೆ ನೂರು ಸಿದ್ದರಾಮಯ್ಯ ಹೆಸರನ್ನು ಕೆಆರ್‌ಎಸ್ ರಸ್ತೆಗೆ ಇಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟನೆ ನೀಡಿದರು.