ಮೈಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಗಟ್ಟಿಯಾಗಿರುತ್ತದೆ. ಯಾವ ಶಿಂಧೆ ಸರ್ಕಾರವು ಬರಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಶ್ರೀ ರಾಮುಲು ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು (ಮಾ.1) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾರ ನಮಗೆ ಗೊತ್ತಿಲ್ಲ ಇನು ನಿಮಗೆ ಹೇಗೆ ಗೊತ್ತು? ಎಂದು ಮಾಧ್ಯಮದವರನ್ನೆ ಮರು ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.ಯಾವ ಶಿಂಧೆನೂ ಬರಲ್ಲ. ಸಚಿವ ರಾಜಣ್ಣ ಹೇಳಿಕೆ ನೀಡಿದರೂ ಅದು ಮುಖ್ಯವಲ್ಲ. ಸಿಎಂಬದಲಾವಣೆ ಕುರಿತಾದ ಚರ್ಚೆ ಏನು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ ಹಣ ದುರುಪಯೋಗದ ವಿಚಾರವಾಗಿ ಮಾತನಾಡಿದ ಅವರು, ಕಾನೂನು ಪ್ರಕಾರವೇ ಹಣ ಬಳಕೆ ಮಾಡುತ್ತಿದ್ದೇವೆ. ನಾವು ಯಾವುದೇ ಹಣ ದುರ್ಬಳಕೆ ಮಾಡುತ್ತಿಲ್ಲ. ಆದರೆ, ಬಿಜೆಪಿ ದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದರು.
ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 10 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಯಿತು. ಅದನ್ನು ಪ್ರಶ್ನೆ ಮಾಡಲಿಲ್ಲ. ಈಗ ಆಧಾರವಿಲ್ಲದಿದ್ದರೂ ದಲಿತರ ಹಣ ದುರ್ಬಳಕೆ ಅಂತ ಬೊಬ್ಬೆ ಹೊಡೆಯುತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.





