ಮೈಸೂರು: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದ್ದು, ಮೈಸೂರಿನ ಇಸ್ಕಾನ್ ದೇವಾಲಯಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿದೆ.
ಶ್ರೀಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಣೆ ಮಾಡಲಾಗುತ್ತದೆ.
ಪ್ರತಿಯೊಂದು ಮನೆಯಲ್ಲಿ ಪೋಷಕರು ಚಿಕ್ಕ ಚಿಕ್ಕ ಮಕ್ಕಳಿಗೆ ಶ್ರೀಕೃಷ್ಣನ ವೇಷ ಭೂಷಣ ತೊಡಿಸುವುದು ಹಬ್ಬದ ವಿಶೇಷ.
ಸಾಂಸ್ಕೃತಿಕ ನಗರಿ ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ಇಂದು ಭಕ್ತಿ ಭಾವ ಹಾಗೂ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಇಸ್ಕಾನ್ ದೇವಾಲಯದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾವಿರಾರು ಜನರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ.





