ಮೈಸೂರು: ಸಾಂಸಕೃತಿಕ ನಗರಿ ಮೈಸೂರು ನಗರದಾದ್ಯಂತ ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮೂಲಕ ಕಣ್ಗಾವಲು ವಹಿಸಲಿದ್ದಾರೆ ಎಂದು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಈ ಕುರಿತು ಇಂದು(ಡಿಸೆಂಬರ್.30) ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆ ಪ್ರಯುಕ್ತ 2025ರ ಜನವರಿ 1 ರಂದು ಮಧ್ಯರಾತ್ರಿ ಒಂದು ಗಂಟೆಯವರೆಗೂ ಅವಕಾಶ ನೀಡಲಾಗಿದೆ. ಆದರೆ ಈ ನಿಯಮವನ್ನು ಮೀರಿದರೆ ದಂಡ ಬಿಳೋದು ಖಂಡಿತ. ಇನ್ನೂ ಶುಭ ಕೋರುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮಹಿಳೆಯರ ರಕ್ಷಣೆಗಾಗಿ ಪಿಂಕ್ ಗರುಡ ಪೊಲೀಸ್ ಪಡೆ ಗಸ್ತು ತಿರುಗಲಿದೆ. ಜೊತೆಗೆ ಹೊಸ ವರ್ಷ ಸಂಭ್ರಮದ ನೆಪದಲ್ಲಿ ವೀಲ್ಹಿಂಗ್ ಹಾಗೂ ಡ್ರಾಗ್ ರೇಸ್, ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕ್ಷಿಪ್ರ ಪಡೆ ಕಾರ್ಯ ನಿರ್ವಹಿಸಲಿದೆ ಹಾಗೂ ಅದರೊಂದಿಗೆ ವಿದ್ವಂಸಕ ಕೃತ್ಯ ತಡೆಗೆ ಶ್ವಾನ ದಳವೂ ಕೂಡ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ನಗರದಾದ್ಯಂತ ಭದ್ರತೆಗಾಗಿ ಪೊಲೀಸ್ ಇಲಾಖೆಯ ವತಿಯಿಂದ 4 ಡಿಸಿಪಿ, 12 ಎಸಿಪಿ, 32 ಪಿಐ, 53 ಪಿಎಸ್‌ಐ, 112 ಎಎಸ್‌ಐ, 895 ಎಚ್‌ಸಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಅಲ್ಲದೇ 8 ಸಿಎಆರ್ ತುಕಡಿ, 4 ಕೆಎಸ್‌ಆರ್‌ಪಿ, 2 ಕಮಾಂಡೋ ಪಡೆ, 1 ಶ್ವಾನ ದಳ ಹಾಗೂ 2 ಎಎಸ್‌ಪಿಯಿಂದ ಬಿಗಿ ಬಂದೋ ಬಸ್ತ್ ಮಾಡುವ ಮೂಲಕ ಕಣ್ಗಾವಲು ಇರಿಸಲಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುವುದು. ಹೊಸ ವರ್ಷಾಚರಣೆಯನ್ನು ಮುಕ್ತಾಯಗೊಳಿಸಲು ಜನವರಿ 2ರ ಮಧ್ಯರಾತ್ರಿ 1 ಗಂಟೆಯವರೆಗೂ ಪೊಲೀಸ್ ಇಲಾಖೆ ಗಡುವು ನೀಡಿದೆ ಎಂದಿದ್ದಾರೆ.




