ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹಮ್ಮದ್‌ಗೆ ಮಾಜಿ ಸಚಿವ ಸಾ.ರಾ.ಮಗೇಶ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಎಚ್‌ಡಿಕೆ ಅವರ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಇದೆ ಎಂದು ಜಮೀರ್ ಅಹಮ್ಮದ್ ಲಘುವಾಗಿ ಮಾತನಾಡಿದ್ದರು.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು, ದರಿದ್ರ ನಾರಾಯಣ ಹರಿ ಅಂತ 2006ರಲ್ಲಿ ಚಂದ ಎತ್ತಿ ಮಾಜಿ ಪ್ರಧಾನಿ ದೇವೇಗೌಡ ಅವರು, ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದರು. ಲಘುವಾಗಿ ಮಾತನಾಡುವುದು ಸರಿಯಲ್ಲ. ಇದೆಲ್ಲವನ್ನು ನೋಡಿದರೆ ಜನರಿಗೆ ರಾಜಕಾರಣದ ಬಗ್ಗೆ ಕೆಟ್ಟ ಮನೋಭಾವನೆ ಬೆಳೆಯುತ್ತದೆ ಎಂದು ಜಮೀರ್ ಅಹಮ್ಮದ್‌ಗೆ ತಿರುಗೇಟು ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನೀವು ನಡೆದು ಬಂದ ಹಾದಿ ಬಗ್ಗೆ ಒಮ್ಮೆ ಕೂತು ಯೋಚನೆ ಮಾಡಿ. ಆಗ ಯಾರ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ಅಧಿಕಾರಕ್ಕಾಗಿ ಆತ್ಮಸಾಕ್ಷಿ ವಿರುದ್ಧ ನಡೆದುಕೊಳ್ಳಬೇಡಿ. ತಪ್ಪು ಮಾಡಿದವರನ್ನು ಮುಲಾಜಿಲ್ಲದೇ ಕಂಬಿ ಹಿಂದೆ ಹಾಕಿ ಎಂದು ಒತ್ತಾಯಿಸಿದರು.