ಮೈಸೂರು : ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ.25 ರಂದು ಬೆಳಗಿನ ಜಾವ 5.30ಕ್ಕೆ 108 ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ.ಪಿ.ಎನ್. ಗಣೇಶ್‌ಕುಮಾರ್ ತಿಳಿಸಿದರು.
ನಗರದಲ್ಲಿ ಅವರು ಸುದ್ದಿಗಾರರೊಡನೆ ಮಾತನಾಡಿ, ಮೈಸೂರು ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಶನ್, ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮ, ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಗ್ಲೋಬಲ್ ಯೋಗ ಪೋರ್ ಸಂಯುಕ್ತಾಶ್ರಯದಲ್ಲಿ 35ನೇ ರಥಸಪ್ತಮಿ ಅಂಗವಾಗಿ ವಿವೇಕಾನಂದ ಜಯಂತಿ ಹಾಗೂ ಗಣರಾಜ್ಯೋತ್ಸವ ಪ್ರಯುಕ್ತವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಟಿ.ಎಸ್. ಶ್ರೀವತ್ಸ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಸಿದ್ದರಾಜು, ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮೈಸೂರು ಪ್ರಾಂಶುಪಾಲ ಶ್ರೀವತ್ಸ, ಗ್ಲೋಬಲ್ ಯೋಗ ಫಾರಂ ಅಧ್ಯಕ್ಷ ಶ್ರೀಹರಿ, ಖಜಾಂಚಿ ಶಶಿಕುಮಾರ್, ನಿವೃತ್ತ ಡಿವೈಎಸ್‌ಪಿ ಉಮೇಶ್ ಗಣಪತಿ ಭಟ್, ಶಿಕ್ಷಣ ಇಲಾಖೆ ನಿವೃತ್ತ ಡಿಡಿಪಿಐ ಮಂಜುಳಾ ಇನ್ನಿತರರು ಆಗಮಿಸಲಿದ್ದಾರೆ. ಇದು ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದ್ದು, ಆಗಮಿಸುವವರು ಬಿಳಿ ಬಣ್ಣದ ಉಡುಪು ಧರಿಸಬೇಕು ಹಾಗೂ ತಾವೇ ಮ್ಯಾಟ್ ತರಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆ, ಯೋಗ ಚರ್ಚಾ ಸ್ಪರ್ಧೆ, ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದರವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಹಾಗೂ 108 ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತೆ ಎಂದು ತಿಳಿಸಿದರು.
ನಿವೃತ್ತ ಡಿಡಿಪಿಐ ಮಂಜುಳಾ, ಶಶಿಕುಮಾರ್, ವಿವೇಕ್, ನಿಶಾಂತ್, ಪ್ರೇಮ್‌ಕುಮಾರ್ ಇದ್ದರು.





