ಮೈಸೂರು: 2028ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ನಿಂದ ದೂರ ಉಳಿದಿರುವುದೇ ಆಗಿದೆ.
ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪರ್ಧೆ ಬಗ್ಗೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಚುನಾವಣೆ ಬಂದಾಗ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಜೆಡಿಎಸ್‌ನಲ್ಲಿ ಇದ್ದೇನೆ. ಜೆಡಿಎಸ್‌ನಿಂದ ಒಂದು ಹೆಜ್ಜೆ ಹೊರ ತೆಗೆದಿಲ್ಲ. ಕೆಲ ವಿಚಾರದಲ್ಲಿ ನೋವಾಗಿದೆ. ಈ ಬಗ್ಗೆ ನಾಯಕರಿಗೂ ಗೊತ್ತಿದೆ. ನನಗೆ ನೋವಾಗಿದೆ ಎಂದು ಪಕ್ಷದಿಂದ ಹೊರ ಹೋಗಿಲ್ಲ. ಜೆಡಿಎಸ್ ವಿರುದ್ಧವಾಗಿ ನಾನೂ ಯಾವತ್ತೂ ಮಾತಾಡಿಲ್ಲ. ಒಳ್ಳೆಯ ದಿನ ಬರುತ್ತದೆ. ಎಲ್ಲವೂ ಸರಿ ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.





