Mysore
26
light rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ದೊಡ್ಡಕೆರೆ, ಲಿಂಗಾಂಬುಧಿ ಕೆರೆ ಪುನರುಜ್ಜೀವನಗೊಳಿಸಿ : ಪರಿಸರ ಸಂರಕ್ಷಣಾ ವೇದಿಕೆ ಒತ್ತಾಯ

ಮೈಸೂರು : ನಗರದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ) ರಚಿಸಿರುವ ನಿವೇಶನಗಳನ್ನು ತೆರವುಗೊಳಿಸಿ ದೊಡ್ಡಕೆರೆ ಮತ್ತು ಲಿಂಗಾಂಬುಧಿ ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ದಾವಣಗೆರೆಯ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನಿ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ, ನಿವೇಶನಗಳ ಹೆಸರಿನಲ್ಲಿ ಈವರೆಗೆ ಮೈಸೂರು ಸೇರಿದಂತೆ ರಾಜ್ಯದಲ್ಲಿ ಹಲವಾರು ಕೆರೆಕಟ್ಟೆಗಳನ್ನು ಮುಚ್ಚಲಾಗಿದ್ದು, ಜಲಮೂಲಗಳಿಗೆ ಕಂಟಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೀಗ ನಗರದ ಕುರುಬಾರಹಳ್ಳಿ ಗ್ರಾಮದ ಸರ್ವೇ ನಂ.4ರಲ್ಲಿ ಎಂಡಿಎ ವತಿಯಿಂದ ನಿವೇಶನಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರಕೃತಿ ಮತ್ತು ಜಲಮೂಲಗಳಿಗೆ ಹಾನಿಯಾಗಿದ್ದು, ಭೂಗರ್ಭದಲ್ಲಿ ಜಲ ಮಣ್ಣು ಕುಸಿಯುವ ಅಪಾಯವಿದೆ. ಕೂಡಲೇ ಎಂಡಿಎ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಪರಿಸರ ಸಮತೋಲನ ಕಾಪಾಡಲು ಹಾಗೂ ಭವಿಷ್ಯದಲ್ಲಿ ಜಲಮೂಲಗಳನ್ನು ಸಂರಕ್ಷಿಸುವ ಸಲುವಾಗಿ ನಿವೇಶಗಳನ್ನು ತೆರವುಗೊಳಿಸಬೇಕು ಎಂದರು.

ಸರ್ವೇ ನಂ.4ರ ಜಲಮೂಲ ಪ್ರದೇಶದ ನಿವೇಶನಗಳನ್ನು ರದ್ದುಪಡಿಸಿ, ತೆರವು ಮಾಡಬೇಕು. ಹಾಳಾಗಿರುವ ಕೆರೆ, ಕಟ್ಟೆಗಳನ್ನು ಪುನರ್‌ಸ್ಥಾಪಿಸಿ ಸಂರಕ್ಷಿಸಬೇಕು. ನಗರದ ದೊಡ್ಡಕೆರೆಯನ್ನು ಮೂಲ ಸ್ಥಿತಿಗೆ ತಂದು ಪುನರುಜ್ಜೀವನಗೊಳಿಸಬೇಕು. ಪರಿಸರ ಹಾನಿಗೆ ಕಾರಣವಾದ ಯೋಜನೆಗಳನ್ನು ಮರುಪರಿಶೀಲಿಸಿ, ನಗರದ ಮಾಲ್ ಆಫ್ ಮೈಸೂರ್‌ಗೆ ನೀಡಿದ ಅನುಮೋದನೆಯನ್ನು ರದ್ದುಗೊಳಿಸಬೇಕು. ಲಿಂಗಾಂಬುಧಿ ಕೆರೆಯನ್ನು ಸಂಪೂರ್ಣವಾಗಿ ಪುನರ್ ಸ್ಥಾಪಿಸಿ ಅದರ ಆವರಣದ ಸುತ್ತಲಿನ ಅಕ್ರಮ ನಿರ್ಮಾಣಗಳನ್ನು ಕ್ರಮ ಜರುಗಿಸಿ ತೆರವುಗೊಳಿಸಬೇಕು. ಈ ಎಲ್ಲಾ ಮನವಿಗಳನ್ನು ಪರಿಗಣಿಸಿ 15 ದಿನಗಳೊಳಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಎಸ್.ಮಾಲತೇಶ್, ವಿಜಯ್‌ಕುಮಾರ್, ಎಂ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:
error: Content is protected !!