ಮೈಸೂರು: ಒಂದು ಕೋಟಿ ರೂ ವೆಚ್ಚದಲ್ಲಿ ಮೈಸೂರು ಮಹಾನಗರ ಪಾಲಿಕೆ ಕಟ್ಟಡದ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಷ್ ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದ ಮೇಲ್ಛಾವಣಿಯಲ್ಲಿ ಬಿರುಕು ಉಂಟಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಲಿಕೆ ದುರಸ್ತಿಗಾಗಿ ಹಲವು ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕಾಮಗಾರಿ ವೇಳೆ ಮೇಲ್ಛಾವಣಿಯಲ್ಲಿ ಬಿರುಕು ಉಂಟಾಗಿದೆ. ಕಟ್ಟಡ ದುರಸ್ತಿಗಾಗಿ ಟೆಂಡರ್ ಕರೆಯಲಾಗಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಿಕೆ ಕಟ್ಟಡದ ದುರಸ್ತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇನ್ನು ವಾಣಿವಿಲಾಸ ನೀರು ಸರಬರಾಜು ಮಂಡಳಿಯ ನೌಕರರು ವಾಟರ್ ಬಿಲ್ ಹಣವನ್ನು ಗುಳುಂ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ತಪ್ಪು ಮಾಡಿರುವವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ವಾಟರ್ ಬಿಲ್ ಹಣವನ್ನು ವಸೂಲಿ ಮಾಡಲಾಗಿದೆ. ತಪ್ಪಿತಸ್ಥ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.