Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಜೆಪಿ ಆರೋಪ ಸತ್ಯಕ್ಕೆ ದೂರ: ಡಾ.ಪುಷ್ಪಾ ಅಮರನಾಥ್‌

ಮೈಸೂರು: ಕಾಂಗ್ರೆಸ್‌ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಿ ಅನ್ನಭಾಗ್ಯ ಹೊರೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪಂಚ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್‌ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು(ನ.21) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರ ಆರೋಪಗಳು ಸುಳ್ಳಾಗಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಇನ್ನು 10 ಲಕ್ಷ ಜನ ಬಿಪಿಎಲ್‌ ಕಾರ್ಡ್‌ ಜನರಿದ್ದರು ಸಹ ಅವರಿಗೆ ಕಾರ್ಡ್‌ ಸೌಲಭ್ಯವನ್ನು ನೀಡಲು ಸಿದ್ದವಿದೆ ಎಂದರು.

ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪ್ರತಿ ಬಾರಿಯೂ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಬಸವೇಶ್ವರ ಜಯಂತಿ ದಿನದಂದೇ ಅನ್ನಭಾಗ್ಯವನ್ನು ಘೋಷಿಸಿ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ. ಹೀಗಿರುವಾಗ ಸರ್ಕಾರದ ವಿರುದ್ಧ ವಿಪಕ್ಷಗಳು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಬಿಪಿಎಲ್‌ ಕಾರ್ಡ್‌ ರದ್ದತಿ ಬಗ್ಗೆ ಮೈಸೂರು ಭಾಗದ 8 ಜಿಲ್ಲೆಗಳಲ್ಲಿ ಉಸ್ತುವಾರಿ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಜಿಲ್ಲೆಯಲ್ಲಿ ಒಟ್ಟು 6,91,370 ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಆದರೆ ಅವುಗಳಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಒಂದಷ್ಟು ಪರಿಷ್ಕರಣೆ ಮಾಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದಾಗ ನಮ್ಮ ಜಿಲ್ಲೆಯಲ್ಲಿ 4,221 ಕಾರ್ಡ್‌ಗಳು ಮಾತ್ರ ರದ್ದಾಗಿವೆ ಎಂದು ತಿಳಿದು ಬಂದಿದೆ ಎಂದರು.

ರದ್ದಾಗಿರುವ ಕಾರ್ಡ್‌ಗಳಲ್ಲಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಿದ್ದರೆ ಇನ್ನೊಮ್ಮೆ ಅರ್ಜಿ ಹಾಕಿ ಪಡೆಯಬಹುದಾಗಿದೆ. ಒಂದು ವೇಳೆ ಮಾನದಂಡ ವ್ಯಾಪ್ತಿಯಲ್ಲಿ ಲೋಪದೋಷಗಳು ಉಂಟಾಗಿ ಕಾರ್ಡ್‌ಗಳನ್ನು ಕೈ ಬಿಟ್ಟಿದ್ದರೆ ಮತ್ತೆ ಸೇರಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಹೀಗಾಗಿ ಯಾರೂ ಸಹ ಬಿಪಿಎಲ್‌ ಕಾರ್ಡ್‌ ರದ್ದಾಗಿರುವ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.

Tags: