ಮೈಸೂರು: ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ ಎಂಬ ಖ್ಯಾತಿ ಗಳಿಸಿರುವ ಮೈಸೂರು ಈಗ ಡ್ರಗ್ಸ್ ನಗರವಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ ಎಂಬ ಖ್ಯಾತಿ ಗಳಿಸಿರುವ ಮೈಸೂರು ಈಗ ಡ್ರಗ್ಸ್ ನಗರವಾಗಿದೆ. ಮುಂಬೈ ಪೊಲೀಸರು ಮೈಸೂರಿಗೆ ಬಂದು ಡ್ರಗ್ಸ್ ಜಾಲ ಬೇಧಿಸಿದ್ದಾರೆ. ಹಾಗಾದರೆ ಮೈಸೂರು ಪೊಲೀಸರು ಏನು ಮಾಡುತ್ತಿದ್ದರು? ಎಂದು ಪ್ರಶ್ನೆ ಮಾಡಿದರು.
ಇನ್ನು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಗೃಹ ಇಲಾಖೆ ಸತ್ತು ಹೋಗಿದೆ. ಮುಡಾ ಹಗರಣದ ನಂತರ ಡ್ರಗ್ಸ್ ಕೇಸ್ ಮೈಸೂರಿನ ದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಇದರಲ್ಲಿ ಕಾಣದ ಕೈಗಳ ಪ್ರಭಾವಿ ಇದ್ದೆ ಇರುತ್ತದೆ. ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತಳವಾರ್ ಅಮಾನತು ಮಾಡಿ, ಒಂದೇ ದಿನದಲ್ಲಿ ಅಮಾನತು ರದ್ದು ಮಾಡಲಾಗಿದೆ.
ಇದರ ಹಿನ್ನೆಲೆ ಏನು? ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವಿ ಕೃಪಾ ಕಟಾಕ್ಷ ಇದೆ. ಪೊಲೀಸರನ್ನು ಕಾರಣ ಕೈ ಕಟ್ಟಿ ಹಾಕಿದೆ. ಅಂತರಾಷ್ಟ್ರೀಯ ಮಟ್ಟದ ದೊಡ್ಡ ಮಾಫಿಯಾ ಸಂಪರ್ಕ ಇದರಲ್ಲಿ ಇದೆ. ರಾಜ್ಯಪಾಲರಿಗೆ ನಾವು ದೂರು ಕೊಡುತ್ತೇವೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಇಂತಹ ಕೃತ್ಯ ನಡೆದಿದೆ.
ಆದ್ದರಿಂದ ಡ್ರಗ್ಸ್ ಮಾಫಿಯಾವನ್ನು ಸಿದ್ದರಾಮಯ್ಯ ಅವರೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು. ಮೈಸೂರಿನ ಡ್ರಗ್ಸ್ ಮಾಫಿಯಾ ಸಿಕ್ಕಿ ಬಿದ್ದ ಮೇಲೆ ಏನಾಗಿದೆ, ಮುಂದುವರೆದ ತನಿಖೆ ಎಲ್ಲಿ ತನಕ ಬಂದಿದೆ ಎಂಬ ಸಮಗ್ರ ಮಾಹಿತಿ ಜನರಿಗೆ ತಿಳಿದಿಲ್ಲ. ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಈ ಪ್ರಕರಣದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.





