ಮೈಸೂರು: ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯಿಸಿ ಪರೀಕ್ಷೆ ಆರಂಭವಾಗಿದ್ದು, ಮೈಸೂರು ಜಿಲ್ಲೆಯಾದ್ಯಂತ 50 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ಬರೆಯಲು ಸಮಯ ನಿಗದಿಯಾಗಿದೆ. ಮಾರ್ಚ್.20ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಮೈಸೂರಿನ ನಗರ ವ್ಯಾಪ್ತಿಯಲ್ಲಿ 27 ಕೇಂದ್ರ, ತಾಲ್ಲೂಕು ವ್ಯಾಪ್ತಿಯಲ್ಲಿ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಈ ಬಾರಿ 32,684 ಮಂದಿ ಹೊಸಬ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 14,680 ಮಂದಿ ಬಾಲಕರು ಹಾಗೂ 18,004 ಮಂದಿ ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ಇನ್ನು 1650 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 1028 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಅಕ್ರಮ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಒಂದು ಕೇಂದ್ರಕ್ಕೆ ಇಬ್ಬರು ಅಬ್ಸರ್ವರ್ ನೇಮಕ ಮಾಡಲಾಗಿದ್ದು, ಮುನ್ನೆಚ್ಚರಿಕೆಯಾಗಿ ಪರೀಕ್ಷಾ ಕೇಂದ್ರದ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.





