ಮೈಸೂರು: ಪಾಕಿಸ್ತಾನದ ರಾಷ್ಟ್ರಪಿತ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಗಿದ್ದು, ಅವರ ಕೂಸಿನ ಮೇಲೆ ಹಲ್ಲೆ ಮಾಡಿದಾಗ ಅವರಿಗೆ ಹೊಟ್ಟೆ ಉರಿಯುತ್ತದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಆಪರೇಷನ್ ಸಿಂಧೂರ ಚುಟುಪುಟು ದಾಳಿ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಚುಟುಪುಟು ದಾಳಿ ಮಾಡಿದ ನಂತರವೇ ಪಾಕಿಸ್ತಾನದ ಡಿಜಿಎಂ ನಮಗೆ ಕರೆ ಮಾಡಿದ್ದು. ಯುದ್ಧ ನಿಲ್ಲಿಸಿ ಎಂದು ಯಾಕೆ ಕೇಳುತ್ತಾ ಇದ್ದರು? ಎಂದು ಪ್ರಶ್ನೆ ಮಾಡಿದರು. ಪಾಕಿಸ್ತಾನದ ಪ್ರಧಾನಿ ಕೂಡ ದಾಳಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳೆದ 2008ರ ಮುಂಬೈ ದಾಳಿ ಬಳಿಕ ನೀವು ಏನು ಮಾಡಿದ್ರಿ. ಪ್ರಧಾನಿ ನರೇಂದ್ರ ಮೋದಿ ಮೇಲಿನ ದ್ವೇಷಕ್ಕೆ ಸೇನೆ ಮೇಲೆ ಈ ರೀತಿ ಮಾತನಾಡುವುದು ಸರಿನಾ? ಎಂದು ಕಿಡಿಕಾರಿದರು.
ಇದನ್ನೂ ಓದಿ:- ಬೆಂಗಳೂರು ಮಳೆ ಅವಾಂತರ : ಸಿಎಂ, ಡಿಸಿಎಂ ಸಿಟಿ ರೌಂಡ್ಸ್
ಇನ್ನು ಮೋದಿಯ ದ್ವೇಷಕ್ಕೆ ಕೆಲವು ಕಾಂಗ್ರೆಸ್ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಶಶಿ ತರೂರ್ ಸೇರಿದಂತೆ ಹಲವರು ದೇಶಕ್ಕೆ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರು ಪಾಕಿಸ್ತಾನದ ಮೇಲಿನ ಪ್ರೀತಿಯಿಂದ ಈ ಥರ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.





