ಮೈಸೂರು: ಇಷ್ಟು ದಿನ ಹಿಂದೂ ವಿರೋಧಿಯಾಗಿದ್ದ ಸಿಎಂ ಸಿದ್ದರಾಮಯ್ಯ ಈಗ ಪೊಲೀಸ್ ಇಲಾಖೆ ವಿರೋಧಿಯಾಗಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದುಳಿದವರ ಉದ್ಧಾರಕ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು, ವಾಲ್ಮೀಕಿ ಸಮುದಾಯದ ನಿಷ್ಠಾವಂತ ಅಧಿಕಾರಿ ದಯಾನಂದ್‌ರನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ದಯಾನಂದ್ ಒಬ್ಬ ಸಮರ್ಥ, ನಿಷ್ಠಾವಂತ ಅಧಿಕಾರಿ. ನಾಯಕ ಸಮುದಾಯದ ವ್ಯಕ್ತಿ ಮೇಲೆ ನಿಮಗೆ ಯಾಕೆ ಇಷ್ಟು ಕೋಪ. ಪೊಲೀಸ್ ಇಲಾಖೆ ಅನ್‌ಫಿಟ್ ಅಲ್ಲ ಸರ್ಕಾರ ಅನ್‌ಫಿಟ್. ಘಟನೆ ನಡೆದು ಒಂದು ವಾರವಾದರು ಸಿಎಂ ನೈತಿಕ ಹೊಣೆ ಹೊತ್ತಿಲ್ಲ.
ಸಿಎಂ ನಾಲ್ಕು ಹನಿ ಕಣ್ಣೀರು ಹಾಕಿಲ್ಲ. ಅನುಕಂಪ, ಪಶ್ಚಾತ್ತಾಪದ ಮಾತು ಬಂದಿಲ್ಲ. ಕಾಲ್ತುಳಿತದ ವಿಚಾರ ಎರಡು ಗಂಟೆ ತಡವಾಗಿ ಗೊತ್ತಾಯಿತು ಎನ್ನುವುದಾದರೆ ನೀವು ರಾಜ್ಯ ಹೇಗೆ ಸಂಭಾಳಿಸುತ್ತೀರಿ? ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್‌ರನ್ನು ಯಾಕೆ ತೆಗೆದು ಹಾಕಿದ್ರಿ. ಮೊದಲು ಈ ರಹಸ್ಯ ಬಿಚ್ಚಿಡಿ. ಸಿಎಂ ತಮ್ಮ ಮೊಮ್ಮಗನಿಗೆ ಫೋಟೋಗ್ರಾಫ್, ಆಟೋಗ್ರಾಫ್ ಕೊಡಿಸಲು ಓಡುತ್ತಿದ್ದರೇನೋ. ಅದಕ್ಕೆ ಕಾಲ್ತುಳಿತ ವಿಚಾರ ಗೊತ್ತಾಗಿಲ್ಲ.
ಸತ್ಯವತಿ ಯಾಕೆ ಒತ್ತಡ ಹೇರಿ ಕಾರ್ಯಕ್ರಮ ಮಾಡಿಸಿದರು. ಯಾಕೆ ಅವರನ್ನು ಇನ್ನೂ ನೀವು ಸಸ್ಪೆಂಡ್ ಮಾಡಿಲ್ಲ. ಯಾಕೆ ಅವರನ್ನು ರಕ್ಷಣೆ ಮಾಡುತ್ತಿದ್ದಿರಿ? ಸತ್ಯವತಿ ಅವರು ಯಾಕೆ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಎಂದು ಹೇಳಿದ್ರು? 11 ಜನರ ಸಾವಿಗೆ ಕಣ್ಣೀರು ಹಾಕಿ ಅವರ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳ ಬೇಕಾದ ಸಿಎಂ ಮದ್ವೆ, ಮುಂಜಿ ಎಂದು ಓಡಾಡುತ್ತಿದ್ದಾರೆ. ಸಿಎಂ ಅವರೇ ನಿಮಗೆ ಮದ್ವೆ ಊಟ, ಬೀಗರ ಊಟನೇ ಮುಖ್ಯನಾ? ವಿಧಾನಸೌಧಕ್ಕೆ ನೀವು ಸಿಎಂ ಅನ್ನುವುದಾದರೆ ನೀವು ಒಬ್ಬ ಸಿಎಂ ಅಲ್ಲ. ಈ ರಾಜ್ಯವನ್ನು ಅಧಿಕಾರಿಗಳಿಗೆ ಬರೆದುಕೊಡಿ ಎಂದು ವಾಗ್ದಾಳಿ ನಡೆಸಿದರು.





