ಮೈಸೂರು: ನಮ್ಮ ಕರ್ನಾಟಕದಲ್ಲಿ ಅನ್ಯರಾಜ್ಯದ ಮಾರ್ವಾಡಿಗಳೇ ಮಾಲೀಕರಾಗಿ ನೆಲೆಗೊಳ್ಳುತ್ತಿದ್ದಾರೆ. ನಮ್ಮವರು ಕೂಲಿಗಳಾಗುತ್ತಿದ್ದಾರೆ ಎಂದು ಮೈಸೂರು ವಲಯದ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಯ ಭೂಸ್ವಾಧೀನಾಧಿಕಾರಿ ಡಾ.ಎನ್.ಸಿ.ವೆಂಕಟರಾಜು ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಸುವರ್ಣ ಕರ್ನಾಟಕ ಸವಿನೆನಪಿನಲ್ಲಿ ‘ ಕನ್ನಡ- ಕರ್ನಾಟಕ- ಕನ್ನಡಿಗ’ ಎಂಬ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದದಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಪ್ರಸಿದ್ದವಾದ ಕರ್ನಾಟಕ ಎಂಬ ಸ್ಥಳ ಇದೆ. ಊಟಿ, ಕಾಸರಗೋಡು ನಮ್ಮವೇ. ಜೊತೆಗೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಸಂಬಂಧಿತ ಶಾಸನಗಳು ಬಗೆದಷ್ಟು ದೊರಕುತ್ತಿವೆ. ಮಹಾಜನ್ ವರದಿಯಲ್ಲಿ 264 ಗ್ರಾಮಗಳು ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ದಾಖಲಾಗಿದೆ. ಆದರೆ ಇನ್ನೂ ಗಡಿ ವಿವಾದ ನಿಂತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅನ್ಯ ರಾಜ್ಯದ ಗುಜರಾತಿಗಳು, ಮಾರ್ವಾಡಿಗಳು, ಬಿಹಾರಿಗಳು ನಮ್ಮ ರಾಜ್ಯದಲ್ಲಿ ನೆಲೆಗೊಳ್ಳುತ್ತಿದ್ದೂ, ನಾವು ಅವರ ಭಾಷೆಗಳನ್ನು ಕಲಿತು ನಾವು ಅವರ ಜೊತೆ ವ್ಯವಹಾರ ನಡೆಸುವ ದುಸ್ಥಿತಿ ಬಂದಿದೆ. ಇನ್ನು ನಮ್ಮ ನೆಲೆ, ಭಾಷೆ ಎಲ್ಲಿ ಉಳಿಯಿತು?ಅನ್ಯ ರಾಜ್ಯದವರು ನಮ್ಮಲ್ಲಿ ಬಂದು ಉದ್ದಿಮೆದಾರರಾಗುತ್ತಿದ್ದಾರೆ. ಕನ್ನಡಿಗರು ಹೆಚ್ಚೆಚ್ಚು ಉದ್ದಿಮೆದಾರರಾಗುವ ಕಡೆಗೆ ಮನಸ್ಸು ಮಾಡಬೇಕು. ಸರ್ಕಾರ ಎಸ್ಸಿ ಎಸ್ಟಿ ಸಮುದಾಯಕ್ಕೆ ಕನಿಷ್ಠ ಶೇಕಡವಾರು ಬಡ್ಡಿಯಲ್ಲಿ ಹೆಚ್ಚು ಹಣವನ್ನು ಸಾಲವಾಗಿ ಉದ್ದಿಮೆ ಸ್ಥಾಪಿಸಲು ಅವಕಾಶ ಮಾಡಿಕೊಡುತ್ತಿದ್ದೆ. ಯಾರು ಮುಂದೆ ಬರುತ್ತಿಲ್ಲ. ಇಂತಹ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕಿ ಎಸ್.ಡಿ.ಶಶಿಕಲಾ, ಚಿಂತಕ ಸಿ.ನಾಗಣ್ಣ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಕೆ.ಸಿ.ಶಿವಾರೆಡ್ಡಿ ಇದ್ದರು.





