ಮೈಸೂರು: ಎಂಪಿ ಟಿಕೆಟ್ ಕಳೆದುಕೊಂಡು ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ ಹಾಗೂ ಜನರ ಆಶೀರ್ವಾದ ಇವತ್ತಿಗೂ ಹಾಗೆಯೇ ಇದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ಎಂಪಿ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ ಮತ್ತು ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ಧಾಂತಿಕ ಕೆಲಸ ಮತ್ತು ಹೋರಾಟವನ್ನು 8 ಎಫ್‌ಐಆರ್ ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುತ್ತದೆ ಎಂದು ತೀವ್ರ ವಿಶ್ವಾಸದಲ್ಲಿದ್ದ ಪ್ರತಾಪ್ ಸಿಂಹ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಮಿಸ್ ಆಗಿತ್ತು. ಕೊನೆಗೆ ಬಿಜೆಪಿ ಹೈಕಮಾಂಡ್ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಲಕ್ಷ್ಮಣ್ ವಿರುದ್ಧ 1.30 ಲಕ್ಷ ಮತಗಳ ಅಂತರದಿಂದ ಯದುವೀರ್ ಒಡೆಯರ್ ಜಯಗಳಿಸಿದರು. ಪರಿಣಾಮ ಸಿಎಂ ಸಿದ್ದರಾಮಯ್ಯಗೆ ತವರು ಜಿಲ್ಲೆಯಲ್ಲೇ ಭಾರೀ ಮುಖಭಂಗವಾಗಿತ್ತು.