ಮೈಸೂರು: ಇಲ್ಲಿನ ಅಶೋಕಪುರಂ ಬಳಿ ಇರುವ ಸಿಲ್ಕ್ ಫ್ಯಾಕ್ಟರಿಯಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೇ ಗೇಟ್ ಬಳಿಯೇ ನಿಂತಿದ್ದು, ಅಧಿಕಾರಿಗಳು ಟೆಂಡರ್ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಇಂದು ಕೆಲಸಕ್ಕೆ ಬಾರದಂತೆ ರಜೆ ಘೋಷಣೆ ಮಾಡಲಾಗಿದ್ದು, ಕಾರ್ಮಿಕರು ಗ್ರ್ಯಾಜುಯಿಟಿ, ಸರ್ವೀಸ್ ಬ್ರೇಕ್ ಆಗುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಪುರುಷ ಹಾಗೂ 200ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಗೆ ಆತಂಕ ಎದುರಾಗಿದೆ. ನಾಳೆಯಿಂದ ಮತ್ತೆ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಹೇಳುತ್ತಿದ್ದು, ಕಾರ್ಮಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಬ್ಬ ವ್ಯಕ್ತಿಗೆ ಟೆಂಡರ್ ನೀಡಲಾಗಿದ್ದು, ಇದೀಗ ಹೊಸ ಟೆಂಡರ್ ಬಂದಾಗ ಸಂಬಳದಲ್ಲಿ ಏರುಪೇರಾಗುವ ಸಾಧ್ಯತೆ ಎದುರಾಗಿದೆ.
ಇನ್ನು ಕಾರ್ಮಿಕರು ಗೇಟ್ ಬಳಿಯೇ ನಿಂತಿದ್ದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ನಾಳೆಯಿಂದ ಕೆಲಸ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕರು, ಒಂದು ದಿನದ ರಜೆಯಿಂದ ಗ್ರ್ಯಾಜುಯಿಟಿಗೆ ತೊಂದರೆಯಗದಂತೆ ಸಿಎಂ ಬಳಿ ಮನವಿ ಮಾಡುತ್ತೇನೆ. ಯಾರನ್ನು ಕೆಲಸದಿಂದ ತೆಗೆಯಲು ಬಿಡುವುದಿಲ್ಲ. ಇಂದೇ ಸಿಎಂ ಭೇಟಿಯಾಗಿ ಅವರ ಮುಂದೆ ಈ ಸಮಸ್ಯೆ ಮುಂದಿಡುತ್ತೇನೆ ಎಂದು ಹೇಳಿದ್ದಾರೆ.