ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲು ನಾಳೆ ಸಂಜೆ 4 ಗಂಟೆಗೆ ಬಾನು ಮುಷ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಲಿದೆ.
ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ಬಾನು ಮುಷ್ತಾಕ್ ಅವರು ಮಾಡಲಿದ್ದಾರೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಅಂತೆಯೇ ರಾಜ್ಯ ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತ ನಾಳೆ ಸಂಜೆ ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಿದೆ.
ಬಾನು ಮುಷ್ತಾಕ್ ಕರ್ನಾಟಕದ ಕನ್ನಡ ಭಾಷೆಯ ಬರಹಗಾರ್ತಿ, ಕಾರ್ಯಕರ್ತೆ ಹಾಗೂ ವಕೀಲೆ. ದೀಪಾ ಭಸ್ತಿ ಅನುವಾದಿಸಿದ ಅವರ ಸಣ್ಣ ಕಥೆಗಳ ಆಯ್ದ ಭಾಗವಾದ ಹಾರ್ಟ್ ಲ್ಯಾಂಪ್‌ಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ಪುಸ್ತಕವು 2025ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದಿದೆ.
ಇನ್ನು ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ದಸರಾ ನಾಡಹಬ್ಬ. ಹಾಗಾಗಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ದಸರಾ ನಾಡಹಬ್ಬವಾಗಿರುವುದರಿಂದ ಇಂಥವರೇ ಉದ್ಘಾಟನೆ ಮಾಡಬೇಕು ಅಂತೆನೋ ಇಲ್ಲ. ಎಲ್ಲರೂ ಸೇರಿ ದಸರಾವನ್ನು ಆಚರಣೆ ಮಾಡಬೇಕು. ನಾಡಹಬ್ಬ ಎಲ್ಲರಿಗೂ ಸೇರಿದ್ದು. ಹಾಗಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.





