ಮೈಸೂರು: ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿಯೂ ಬಜೆಟ್ ಮಂಡಿಸುತ್ತಾರೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸಿಎಂ ಬದಲಾವಣೆ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಲೇ ಇದೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಅಲ್ಲಿಗೆ ಡಿ.ಕೆ.ಶಿವಕುಮಾರ್ ಅವರನ್ನು ಕೂರಿಸಬೇಕು ಎಂದು ತೆರೆಮರೆಯಲ್ಲಿ ಆಟ ಶುರುವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ನಾಯಕರು ಸಿಎಂ ಬದಲಾವಣೆ ಬಗ್ಗೆ ಬಾಂಬ್ ಸಿಡಿಸಿದ್ದು, ಮುಂದಿನ ನವೆಂಬರ್ ತಿಂಗಳ ಒಳಗೆ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ಮಾರ್ಚ್.7ರಂದು ಮಂಡಿಸಿದ ಬಜೆಟ್ ಸಿಎಂ ಸಿದ್ದುಗೆ ಕೊನೆಯ ಬಜೆಟ್ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.
ಈ ಬೆನ್ನಲ್ಲೇ ಸಿಎಂ ಬದಲಾವಣೆ ವಿಚಾರ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ಸಿದ್ದರಾಮಯ್ಯ ಮುಂದಿನ ಬಾರಿಯೂ ಬಜೆಟ್ ಮಂಡಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿಯವರು ಸುಖಾ ಸುಮ್ಮನೆ ವದಂತಿ ಹಬ್ಬಿಸುತ್ತಿದ್ದಾರೆ. ಮೊದಲು ಬಿಜೆಪಿಯವರು ತಮ್ಮ ಪಕ್ಷವನ್ನು ಗಟ್ಟಿ ಮಾಡಿಕೊಳ್ಳಲಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವುದಿಲ್ಲ. ರಾಜ್ಯದಲ್ಲಿ ಅಧಿಕಾರ ಹಸ್ತಾಂತರವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.





