ಮೈಸೂರು: ಸರ್ಕಾರ ನೇರವಾಗಿ ಉದ್ಯೋಗ ನೀಡುವ ಜೊತೆಗೆ ಉದ್ಯೋಗ ಸೃಷ್ಠಿಸುವ ಉದ್ಯಮಗಳಿಗೂ ಬೆನ್ನೆಲುಬಾಗಿ ನಿಲ್ಲಬೇಕು. ಉದ್ಯಮಗಳು ಬೆಳೆದಷ್ಟು ಉದ್ಯೋಗ ಸೃಷ್ಠಿಯಾದಾಗ ಮಾತ್ರ ಬಡತನ ನಿರ್ಮೂಲನೆ ಆಗಲು ಸಾಧ್ಯ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇಂದು(ಜನವರಿ.17) ಭೇರುಂಡ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಉದ್ಯಮಗಳ ವೇಧಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಉದ್ಯೋಗ ಸೃಷ್ಠಿಸುವುದೊಂದಿಗೆ ಉದ್ಯಮ ಕ್ಷೇತ್ರಗಳಿಗೂ ಪ್ರೋತ್ಸಾಹ ನೀಡಬೇಕು. ಆರ್ಥಿಕತೆ ನಿರ್ಮಾಣದಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಷ್ಟು ಅದರ ಫಲಿತಾಂಶ ಉತ್ತಮವಾಗಿರುತ್ತದೆ. ಸರ್ಕಾರ, ಉದ್ಯೋಗ ಮತ್ತು ಸಂಪತ್ತಿನ ಸೃಷ್ಠಿಗೆ ಪೂರಕವಾದ ನಿಯಮಗಳನ್ನು ರಚಿಸಬೇಕು. ಆಗ ಮಾತ್ರ ಸಂಗ್ರಹವಾಗುವ ತೆರಿಗೆಯನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತದೆ ಎಂದರು.
ಸಮಾಜದ ತಳ ವರ್ಗದ ಮಗುವಿಗೂ ಉತ್ತಮ ಶಿಕ್ಷಣ, ಸೌಕರ್ಯ ಸಿಗುವಂತ ಅವಕಾಶ ಕಲ್ಪಿಸಿಕೊಡಬೇಕು. ಉಚಿತ ಹಣ ನೀಡುವುದು ಉತ್ತಮ ಯೋಜನೆ ಅಲ್ಲ. ಕೌಶಲ ಬೆಳೆಸುವುದು, ಶಿಕ್ಷಣ ನೀಡುವುದು, ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡುವುದು ನಮ್ಮ ಆದ್ಯತೆ ಆಗಬೇಕು. ಆದರೆ ಉದ್ಯೋಗ ನೀಡುವುದರಿಂದ ಅಭಿವೃದ್ಧಿಯಾಗುತ್ತದೆಯೇ ಹೊರತು ಹಣ ಹಂಚುವುದರಿಂದ ಅಲ್ಲ. ಗರೀಬಿ ಹಠಾವೋ ಅಂತಹ ಘೋಷಣೆಗಳು ಕೇವಲ ಹೇಳಿಕೆಗಳಿಗೆ ಅಷ್ಟೇ ಸೀಮಿತವಾಗಿದೆ. ಉದ್ಯಮಗಳು ಅಧಿಕವಾಗಿ ಬೆಳೆದಷ್ಟು ಉದ್ಯೋಗಗಳು ಸೃಷ್ಠಿಯಾಗುತ್ತವೆ. ಆಗ ಮಾತ್ರ ಸಮಾಜದಲ್ಲಿ ಬಡತನ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ದೇಶಕ್ಕೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಿರ್ಮಾತೃಗಳಲ್ಲ. ಉದ್ಯಮಿಗಳೇ ನಿಜವಾದ ನಿರ್ಮಾತೃಗಳಾಗಿದ್ದಾರೆ. ಅವರಿಗೆ ಮಾತ್ರ ಬಡ ರೈತ ಮತ್ತು ಕಾರ್ಮಿಕರಿಗೆ ಶಕ್ತಿ ತುಂಬುವ ಸಾಮರ್ಥ್ಯವಿರುವುದು. ಇಂದಿಗೂ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವ ಭಾರತದಂತಹ ಒಂದೇ ಆರ್ಥಿಕತೆಯನ್ನು ನೆಚ್ಚಿ ಕೂರಬೇಡಿ. ಪ್ರಸ್ತುತ ಮಾರುಕಟ್ಟೆಗೆ ತಕ್ಕಂತೆ ನಿಮ್ಮ ಯೋಜನೆಗಳನ್ನು ರೂಪಿಸಿ, ಸುಸ್ಥಿರ ಹಾಗೂ ಜಾಗತಿಕ ದರ್ಜೆಯ ಗುಣಮಟ್ಟದ ಉದ್ಯಮಕ್ಕೆ ಆದ್ಯತೆ ನೀಡುವ ಆಯ್ಕೆ ನಿಮ್ಮದಾಗಿರಲಿ ಎಂದು ಉದ್ಯಮಿಗಳಿಗೆ ತಿಳಿಸಿದರು.





