ಮೈಸೂರು: ಮೈಸೂರಿನಲ್ಲಿಂದು ಕೇಂದ್ರ ಸಚಿವ ವಿ.ಸೋಮಣ್ಣರನ್ನು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಭೇಟಿ ಮಾಡಿ ರೈಲ್ವೆ ಇಲಾಖೆ ಸಂಬಂಧ ಹಲವಾರು ವಿಷಯಗಳನ್ನು ಚರ್ಚೆ ನಡೆಸಿದ್ದಾರೆ.
ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದೊಡ್ಡ ಕವಲಂದೆ ರೈಲ್ವೆ ಗೇಟ್ ನಲ್ಲಿ ಸುಮಾರು 45 ನಿಮಿಷಗಳ ಕಾಲ ರೈಲ್ವೆ ಗೇಟ್ ಹಾಕುತ್ತಿರುವುದರಿಂದ ಅಲ್ಲಿನ ಜನಸಾಮಾನ್ಯರಿಗೆ ಹೆಚ್ಚು ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡ ಶಾಸಕ ದರ್ಶನ್ ಧ್ರುವನಾರಾಯಣ್ ಅವರು, ನಿನ್ನೆ ದೊಡ್ಡ ಕವಲಂದೆ ರೈಲ್ವೆ ಗೇಟ್ ಬಳಿ ಭೇಟಿ ನೀಡಿ ವೀಕ್ಷಿಸಿದರು. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಇಂದು ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ವಿ.ಸೋಮಣ್ಣರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ದೊಡ್ಡ ಕವಲಂದೆ ರೈಲ್ವೆ ಗೇಟ್ 45 ನಿಮಿಷ ಹಾಕುವುದನ್ನು 15 ನಿಮಿಷಕ್ಕೆ ಇಳಿಸಬೇಕು. ನಮ್ಮ ನಂಜನಗೂಡು ತಾಲ್ಲೂಕಿನ ಚಿನ್ನದಗುಡಿ ಹುಂಡಿ ಗ್ರಾಮದಲ್ಲಿ ರೈಲ್ವೆ ಮೇಲು ಸೇತುವೆ ಕಾಮಗಾರಿ ಮಾಡಿಕೊಡಬೇಕು. ನಂಜನಗೂಡು ನಗರ ರಾಷ್ಟ್ರಪತಿ ರಸ್ತೆ ( RP ರೋಡ್ ) ಭಾರ್ಗವಿ ಚಿತ್ರಮಂದಿರ ಸಮೀಪ ರೈಲ್ವೆ ಮೇಲುಸೇತುವೆ ಮಾಡಿಕೊಡುವ ಬಗ್ಗೆ ಸಚಿವರಿಗೆ ಮನವಿ ಮಾಡಲಾಯಿತು. ಇನ್ನು ನಂಜನಗೂಡು ನಗರದ ಅಂಚೆ ಕಚೇರಿಯಿಂದ ಎರಡು ಬದಿಯಲ್ಲಿ ರೈಲ್ವೆ ಫುಟ್ ಬ್ರಿಡ್ಜ್ ಮತ್ತು ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಮನವಿ ಮಾಡಿದ್ದು, ಈ ಎಲ್ಲಾ ಮನವಿಗಳಿಗೂ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.




