ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2025ರ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆ ಇಂದಿನಿಂದ ತಾಲೀಮು ಆರಂಭಿಸಿವೆ.
ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಇಂದಿನಿಂದ ತಾಲೀಮು ಆರಂಭಿಸಲಾಗಿದ್ದು, ವಿಶ್ವ ಆನೆಗಳ ದಿನವೇ ತಾಲೀಮು ಆರಂಭವಾಗಿರುವುದು ವಿಶೇಷವೆನಿಸಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತದ 9 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿ, ಕೆ.ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಸರ್ಕಲ್, ಬನ್ನಿಮಂಟಪ ರಸ್ತೆ ಮಾರ್ಗ ಹಳೆ ಆರ್ ಎಂಸಿ ಮಾರುಕಟ್ಟೆವರೆಗೆ ತಲುಪಿ ಅರಮನೆಗೆ ವಾಪಸ್ ಆಗಿವೆ.
ಈ ವೇಳೆ ನೂರಾರು ಜನರು ರಸ್ತೆ ಇಕ್ಕೆಲಗಳಲ್ಲಿ ನಿಂತು ಆನೆಗಳನ್ನು ಕಣ್ತುಂಬಿಕೊಂಡರು. ರಾಜಬೀದಿಯಲ್ಲಿ ಗಜ ಗಾಂಭೀರ್ಯದಿಂದ ಸಾಗಿದ ಗಜಪಡೆಯನ್ನು ನೋಡಿ ಖುಷಿಯಿಂದ ಫೋಟೋ ತೆಗೆದುಕೊಂಡರು.
ಇನ್ನು ಮೊದಲ ಹಂತದಲ್ಲಿ ಸಾಮಾನ್ಯ ತಾಲೀಮು ನಡೆಸಲಾಗಿದ್ದು, ಕೆಲವು ದಿನಗಳ ಬಳಿಕ ಮರಳಿನ ಮೂಟೆ ಹೊತ್ತು ತಾಲೀಮು ನಡೆಸಲಾಗುತ್ತದೆ. ದಸರಾ ಸಮೀಪಿಸುತ್ತಿದ್ದಂತೆ ಮರದ ಅಂಬಾರಿ ತಾಲೀಮು ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆ ಹಂತ ಹಂತವಾಗಿ ವಿವಿಧ ತಾಲೀಮಿನಲ್ಲಿ ಭಾಗಿಯಾಗಲಿವೆ.





