ಮೈಸೂರು: ಇಲ್ಲಿನ ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರದ್ದು ಯಾವುದೇ ತಪ್ಪಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಉದಯಗಿರಿ ಗಲಭೆಯಲ್ಲಿ ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪೊಲೀಸರು ಸರಿಯಾಗಿ ಕೆಲಸ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಉದಯಗಿರಿ ಗಲಭೆಗೆ ಪೊಲೀಸರ ಕರ್ತವ್ಯ ಲೋಪ ಕಾರಣ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಸಿಎಂ ಉತ್ತರ ಕೊಡುತ್ತಾರೆ. ಈ ಬಗ್ಗೆ ಇನ್ನು 8-10 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ. ಇದರಲ್ಲಿ ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪೊಲೀಸರು ಮುಂದೆ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ ಎಂದರು.
ಘಟನೆಯಲ್ಲಿ ಹಲವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದು ಹೇಳಿದರು.
ಪೊಲೀಸ್ ಠಾಣೆ ಮೇಲೆ ಕಲ್ಲು ಎಸೆದಿರುವವರೆಲ್ಲರೂ 14ರಿಂದ 15 ವರ್ಷದ ಹುಡುಗರು. ಮುಖಂಡರ ಮಾತನ್ನೂ ಅವರು ಕೇಳಿಲ್ಲ. ಪೊಲೀಸರು ಗಲಭೆ ಮಾಡಿದವರನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ತಪ್ಪು ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.