ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಹಾಗೂ ಮಲ್ಲಿಗೆ ನಗರಿ ಎಂದೆಲ್ಲಾ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಒಂದೆಡೆ ಸ್ವಚ್ಛತಾ ಸರ್ವೇಕ್ಷಣಾ ಅಭಿಯಾನ ನಡೆಯುತ್ತಿದ್ದು, ಇನ್ನೊಂದೆಡೆ ಯುಜಿಡಿ ಸಮಸ್ಯೆಯಿಂದ ರಸ್ತೆ ಗಬ್ಬೆದ್ದು ನಾರುತ್ತಿದೆ.
ಮೈಸೂರಿನ ಅಗ್ರಹಾರದಿಂದ ಅರಮನೆಗೆ ಸಂಚರಿಸುವ ಮಾರ್ಗದಲ್ಲಿ ಯುಜಿಡಿ ತೆರೆದುಕೊಂಡಿದ್ದು, ಯುಜಿಡಿ ಬಾಕ್ಸ್‌ನಿಂದ ರಸ್ತೆ ಮಾರ್ಗದಲ್ಲೇ ಕೊಳಚೆ ನೀರು ಹರಿದು ಗಬ್ಬೆದ್ದು ನಾರುತ್ತಿದೆ. ಪರಿಣಾಮ ವಾಹನ ಸವಾರರು ಕೊಳಚೆ ನೀರಿನಲ್ಲೇ ಸಂಚರಿಸುತ್ತಿದ್ದು, ಜನಸಾಮಾನ್ಯರಂತೂ ಮೂಗು ಮುಚ್ಚಿ ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕಳೆದ ಒಂದು ವಾರದಿಂದಲೂ ರಸ್ತೆಯಲ್ಲಿ ಕೊಳಚೆ ನೀರು ಮಳೆ ನೀರಿನಂತೆ ಹರಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.
ಸದ್ಯ ಸ್ವಚ್ಛತಾ ಅಭಿಯಾನದಲ್ಲಿ ನಿರತರಾಗಿರುವ ಪಾಲಿಕೆ ಅಧಿಕಾರಿಗಳು, ನಗರದ ಮಧ್ಯಭಾಗದ ಸಮಸ್ಯೆಯನ್ನೇ ಸರಿಪಡಿಸದಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ತಂದಿದೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಾರ್ವಜನಿಕರು, ಈ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಓಡಾಡಲು ತೀವ್ರ ಕಷ್ಟವಾಗುತ್ತಿದೆ. ಸಂಜೆಯಾದರಂತೂ ಈ ರಸ್ತೆಗೆ ಬರಲು ಸವಾರರು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.





